ಬೆಂಗಳೂರು : ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ ಕೈ ಹಾಕಿದ ಬಿಎಸ್ ಯಡಿಯೂರಪ್ಪನವರಿಗೆ ಅವರದ್ದೇ ಪಕ್ಷದವರು ಈಗ ಜೇನು ಹುಳಗಳಾಗಿ ಕಚ್ಚಲು ಆರಂಭಿಸಿದ್ದಾರೆ.
ಅದರಲ್ಲೂ ಬಿ.ಎಸ್.ಯಡಿಯೂರಪ್ಪನವರ ಕಟ್ಟ ಬೆಂಬಲಿಗ ಎಂದೇ ಬಿಂಬಿತವಾಗಿರುವ ಎಂ.ಪಿ.ರೇಣುಕಾಚಾರ್ಯ ಅವರು ಇದೀಗ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಸಚಿವಸ್ಥಾನ ಕೈ ತಪ್ಪಿದ ಹಿನ್ನೆಲೆ ಇಂದು ರೇಣುಕಾಚಾರ್ಯ ದೆಹಲಿ ದಂಡಯಾತ್ರೆ ನಡೆಸಿದ್ದು, ದೆಹಲಿಗೆ ತೆರಳುವ ಮುನ್ನ ಸಿ.ಪಿ.ಯೋಗೇಶ್ವರ್ ವಿರುದ್ಧ ಮೆಗಾ ಹಗರಣದ ಬಾಂಬ್ ಸಿಡಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಮೆಗಾಸಿಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ.
ಎಲ್ಲವನ್ನ ಇಂದು ದೆಹಲಿ ನಾಯಕರಿಗೆ ನೀಡಲಿದ್ದೇನೆ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ.
ಐವರು ಎಂಎಲ್ ಸಿಗಳು ಸಚಿವರಾಗಿದ್ದಾರೆ. ಸಂಪುಟ ವಿಸ್ತರಣೆ ವೇಳೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕಿತ್ತು ಎಂದು ಗರಂ ಆಗಿದ್ದಾರೆ.ಇನ್ನು ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗಕ್ಕೂ ಅನ್ಯಾಯವಾಗಿದೆ. ಸಚಿವ ಸ್ಥಾನ ಸಿಗದಕ್ಕೆ ಮನಸ್ಸಿಗೆ ನೋವಾಗಿದೆ ಎಂದು ಬೇಸರ ಹೊರಹಾಕಿದರು.