ನವದೆಹಲಿ, ಜನವರಿ 14,2021; ರೈತರ ಪ್ರತಿಭಟನೆ ಕುರಿತ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ “ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಸರಿಯಾಗಿ ನಿಭಾಯಿಸುತ್ತಿದೆ ಎಂದು ನಾವು ಭಾವಿಸುವುದಿಲ್ಲ” ಎಂದು ಹೇಳಿರುವುದು ಕೇಂದ್ರ ಸರ್ಕಾರದ ಹುಂಬ ಧೈರ್ಯ ಮತ್ತು ದುರಹಂಕಾರಕ್ಕೆ ನೀಡಿದ ಹೊಡೆತವಾಗಿದೆ. ರಾಜಧಾನಿಯಲ್ಲಿ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಕೊನೆಗೊಳಿಸಲು ವಿವಾದಿತ ಕೃಷಿ ಕಾನೂನುಗಳಿಗೆ ತಡೆ ನೀಡಿ, ಮಾತುಕತೆಗೆ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಸಂಸತ್ತಿನಲ್ಲಿ ಸಮರ್ಪಕವಾಗಿ ಚರ್ಚೆ ನಡೆಸದೆ ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳು ರೈತರಿಗೆ ಹಾನಿಕಾರಕವಾಗಿದ್ದು, ಕಾರ್ಪೊರೇಟ್ ದೈತ್ಯರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರವೇಶಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಕಾರ್ಪೊರೇಟ್ ದೈತ್ಯರು ನಿಗದಿಪಡಿಸಿದ ಬೆಲೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇದು ಅನಿವಾರ್ಯಗೊಳಿಸುತ್ತದೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂಬ ರೈತರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದೆ ಕೇಂದ್ರ ಸರ್ಕಾರ ಹುಂಬ ಧೈರ್ಯ ಮತ್ತು ಮೊಂಡುತನ ಪ್ರದರ್ಶಿಸುತ್ತಿದೆ. ಪ್ರತಿಭಟನೆ ಆರಂಭವಾಗಿ 47 ದಿನಗಳು ಕಳೆದಿದ್ದರೂ, ಕೇಂದ್ರ ಸರ್ಕಾರ, ರೈತರ ಬೇಡಿಕೆಗೆ ಕಿವಿಗೊಡದೆ ಅವರನ್ನು ಅಪಹಾಸ್ಯ ಮಾಡುತ್ತಿದೆ.
ಕೇಂದ್ರ ಸರ್ಕಾರವು ತನ್ನ ಹುಂಬ ಧೈರ್ಯ ಮತ್ತು ಉದ್ದಟತನವನ್ನು ಕೈಬಿಟ್ಟು ಕೃಷಿ ವಲಯಕ್ಕೆ ಮಾರಕವಾಗಿರುವ ಈ ಕಾನೂನುಗಳನ್ನು ತಕ್ಷಣ ಹಿಂಪಡೆದುಕೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸುತ್ತದೆ.