ಚೆನ್ನೈ: ಚೆನ್ನೈ ಮೂಲದ 23 ವರ್ಷದ ಯುವಕನೊಬ್ಬ ಬರೋಬ್ಬರಿ 11 ಯುವತಿಯರನ್ನು ಮದುವೆಯಾಗಿ ವಂಚಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ತಮಿಳುನಾಡಿನಲ್ಲಿ ಭಾರಿ ಸುದ್ದಿಯಾಗಿದೆ.
ವಂಚಕ ಯುವಕನನ್ನು ಗಣೇಶ್ ಎಂದು ಗುರುತಿಸಲಾಗಿದೆ. ಚೆನ್ನೈನ ವಿಲ್ಲಿವಕ್ಕಮ್ ಮೂಲದ ನಿವಾಸಿಯಾಗಿರುವ ಈತ ಕೊಳತ್ತೂರು ಮೂಲದ 20 ವರ್ಷದ ಯುವತಿಯನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡಿದ್ದ. ಕಳೆದ ವರ್ಷ ಡಿಸೆಂಬರ್ 5ರಂದು ಇಬ್ಬರು ಓಡಿ ಹೋಗಿ, ಯಾರಿಗೂ ಹೇಳದೆ ಮದುವೆಯಾಗಿದ್ದರು. ಇತ್ತ ಯುವತಿ ಪತ್ತೆಯಾಗದಿದ್ದಕ್ಕೆ ಆಕೆಯ ಪಾಲಕರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು.
ಇತ್ತ ಗಣೇಶ್ಗೆ ದೂರು ನೀಡಿರುವುದು ತಿಳಿಯುತ್ತಿದ್ದಂತೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿಲಿವಕ್ಕಮ್ ಪೊಲೀಸರ ಮೊರೆ ಹೋಗಿದ್ದ.ಆದಾಗ್ಯು ಯುವತಿ ತನ್ನ ಪಾಲಕರೊಂದಿಗೆ ಹೋಗಲು ನಿರಾಕರಿಸಿದಳು. ನಾನು ಗಣೇಶ್ನನ್ನು ಇಷ್ಟಪಟ್ಟು, ಸಂತೋಷವಾಗಿಯೇ ಮದುವೆಯಾಗಿದ್ದೇನೆಂದು ಹೇಳುವ ಮೂಲಕ ಪಾಲಕರನ್ನು ಬರಿಗೈಯಲ್ಲಿ ಹಿಂದಿರುಗವಂತೆ ಮಾಡಿದ್ದಳು.ಇದಾದ ಕೆಲವೇ ದಿನಗಳಲ್ಲಿ ತನ್ನ ವರಸೆ ಬದಲಿಸಿ ಗಣೇಶ್, 17 ವರ್ಷದ ಹುಡುಗಿಯನ್ನು ಮನೆಯ ಕೆಲಸಕ್ಕೆಂದು ಹೇಳಿ ಕರೆತರುತ್ತಾನೆ. ಪತ್ನಿ ಹೇಳಿದರೂ ಕೇಳುವುದಿಲ್ಲ. ಹೀಗೆ ದಿನ ಕಳೆಯುತ್ತಾ ಹುಡುಗಿಗೆ ಸರಸವಾಡುವಷ್ಟು ಹತ್ತಿರವಾಗುತ್ತಾನೆ. ಇದು ಪತಿ-ಪತ್ನಿ ನಡುವಿನ ಜಗಳಕ್ಕೆ ಕಾರಣವಾಗುತ್ತದೆ. ಬಳಿಕ ರೂಮಿನಲ್ಲಿ ಪತ್ನಿಯನ್ನು ಕೂಡಿಹಾಕುವ ಗಣೇಶ್, ಕಿರುಕುಳ ನೀಡಲು ಆರಂಭಿಸುತ್ತಾನೆ.
ದಿನ ಕಳೆಯುತ್ತಾ ಪತ್ನಿ ಎದುರಲ್ಲೇ ಹುಡುಗಿಯೊಂದಿಗೆ ತನ್ನ ಕಾಮಪುರಾಣ ಶುರು ಮಾಡುತ್ತಾನೆ. ದಿನದಿಂದ ದಿನಕ್ಕೆ ಆತನ ಅರಾಜಕತೆ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ದಿನ ತನ್ನ ಸ್ನೇಹಿತರನ್ನು ಮನೆಗೆ ಕರೆತಂದ ತನ್ನ ಪತ್ನಿಯ ಜತೆ ಮೃಗೀಯವಾಗಿ ವರ್ತಿಸುತ್ತಾನೆ. ಇದೇ ವೇಳೆ ಜೋರಾಗಿ ಕಿರುಚಿಕೊಳ್ಳುವ ಆತನ ಪತ್ನಿ ಭಯದಿಂದಲೇ ಅಲ್ಲಿಂದ ಕಾಲ್ಕಿಳುತ್ತಾಳೆ. ಬಳಿಕ ನಡೆದ ಘಟನೆಯನ್ನು ಮನೆಯ ಮಾಲೀಕನಿಗೆ ವಿವರಿಸಿ, ಆತನ ಸಹಾಯದೊಂದಿಗೆ ತನ್ನ ತವರನ್ನು ಸೇರುತ್ತಾಳೆ.ಗಣೇಶ್ ನೀಡಿದ ಅಷ್ಟೂ ಕಿರುಕುಳವನ್ನು ಯುವತಿ ತನ್ನ ಪಾಲಕರಿಗೆ ಹೇಳಿದ ಬಳಿಕ ದೂರು ನೀಡಲಾಗುತ್ತದೆ. ಇದರ ಆಧಾರದ ಮೇಲೆ ಗಣೇಶ್ನನ್ನು ಬಂಧಿಸಲಾಗುತ್ತದೆ. ವಿಚಾರಣೆ ವೇಳೆ ಆತ ಹೇಳುವುದನ್ನು ಕೇಳಿದ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ಇದುವರೆಗೂ 11 ಮಂದಿಯನ್ನು ಒಬ್ಬರಿಗೊಬ್ಬರಿಗೆ ಗೊತ್ತಾಗದಂತೆ ಮದುವೆಯಾಗಿರುವುದಾಗಿ ಗಣೇಶ್ ತಪ್ಪೊಪ್ಪಿಕೊಳ್ಳುತ್ತಾನೆ.
ಒಬ್ಬರಿಗೊಬ್ಬರಿಗೆ ಗೊತ್ತಾಗದೇ ನಿರಂತರ ಅವರ ಸಂಪರ್ಕದಲ್ಲಿದ್ದ ಎಂದು ತಿಳಿಸಿದ್ದಾನೆ. ಮದುವೆ ಅಲ್ಲದೆ, ಈಗಲೂ ಇತರೆ ಯುವತಿಯರೊಂದಿಗೆ ದೈಹಿಕ ಸಂಬಂಧ ಹೊಂದಿರುವುದಾಗಿಯು ಹೇಳಿದ್ದಾನೆ. ಸದ್ಯ ಪೊಲೀಸರು ಆತನ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಣೇಶ್ ವಿರುದ್ಧ ದೂರು ನೀಡಲು ಧೈರ್ಯವಾಗಿ ಮುಂದೆ ಬಂದಲ್ಲಿ ಅಂತವರಿಗೆ ಪೊಲೀಸ್ ರಕ್ಷಣೆ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
–Mangalore Varthe