ಮಂಗಳೂರು, ಜ.16: ಖಾಸಗಿ ಬಸ್‌ನಲ್ಲಿ ಯುವತಿಗೆ ಸಹ ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ ಕುರಿತ ಸಾಮಾಜಿಕ ಜಾಲತಾಣದಲ್ಲಿ ಯುವತಿಯು ಪೋಸ್ಟ್ ಹಂಚಿಕೊಂಡಿರುವುದು ಗಮನಕ್ಕೆ ಬಂದ ಬಳಿಕ ಅವರನ್ನು ಸಂಪರ್ಕಿಸಲಾಯಿತು. ಯುವತಿಯೇ ಉಳ್ಳಾಲ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಒಂದು ವೇಳೆ ಯುವತಿ ದೂರು ನೀಡದಿದ್ದಲ್ಲಿ ಸ್ವಯಂ ಪ್ರೇರಿತ ದೂರನ್ನು ಪೊಲೀಸರೇ ದಾಖಲಿಸುತ್ತಿದ್ದರು ಎಂದು ಹೇಳಿದರು.
ಶೀಘ್ರದಲ್ಲಿಯೇ ಬಸ್ ಸಂಘ, ಮಾಲಕರ ಸಭೆ ಕರೆಯಲಾಗುವುದು. ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗುವುದು.
ಈ ಬಗ್ಗೆ ಕ್ರಮ ಕೈಗೊಳ್ಳಲು ಡಿಸಿಪಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.ಬಸ್‌ಗಳಲ್ಲಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದರೆ ಇಂತಹ ಘಟನೆಗಳನ್ನು ತಡೆಗಟ್ಟಬಹುದು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಮಹಿಳಾ ತಂಡವೊಂದನ್ನು ರಚಿಸಿ, ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಚಿಂತಿಸಿದ್ದೇವೆ. ಶೀಘ್ರದಲ್ಲಿಯೇ ಈ ಕಾರ್ಯಾಚರಣೆ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.ಜ.14ರಂದು ಅಪರಾಹ್ನ 3:45ರ ಸುಮಾರಿಗೆ ಯುವತಿಯೊಬ್ಬಳು ಖಾಸಗಿ ಬಸ್‌ನಲ್ಲಿ ದೇರಳಕಟ್ಟೆಯಿಂದ ಪಂಪ್‌ವೆಲ್ ಕಡೆಗೆ ಬರುತ್ತಿದ್ದರು. ಈ ವೇಳೆ ಯುವತಿ ಪಕ್ಕದಲ್ಲಿ ಕುಳಿತ ವ್ಯಕ್ತಿಯೊಬ್ಬ ಆಕೆಯ ದೇಹ ಸ್ಪರ್ಶಿಸಲು ಆರಂಭಿಸಿದ್ದಾನೆ. ಈ ವೇಳೆಯಲ್ಲಿ ಯುವತಿ ವಿರೋಧ ವ್ಯಕ್ತಪಡಿಸಿದರೂ ಆಕೆಯ ಬೆಂಬಲಕ್ಕೆ ಬಸ್ಸಿನಲ್ಲಿದ್ದ ಯಾವ ಪ್ರಯಾಣಿಕರೂ ಮುಂದಾಗಿರಲಿಲ್ಲ. ಚಾಲಕ, ಬಸ್ ನಿರ್ವಾಹಕರೂ ಸ್ಪಂದಿಸಿರಲಿಲ್ಲವೆಂದು ಯುವತಿ ಇನ್‌ಸ್ಟಾಗ್ರಾಂನಲ್ಲಿ ಘಟನೆಯ ವಿವರ ಹಂಚಿಕೊಂಡಿದ್ದರು ಎಂದು ಆಯುಕ್ತರು ಹೇಳಿದರು.ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಶೀಘ್ರದಲ್ಲಿ ಪತ್ತೆಹಚ್ಚಿ, ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಯು ಯಾವುದೇ ಭಾಗದಲ್ಲಿ ನಡೆದರೂ 112 ನಂಬರ್‌ಗೆ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದರು.