ಲಕ್ಷ್ಮೀ ಅಶ್ವಿನ್ ಗೌಡಗೆ ಕಮಲ ಮುಡಿವಾಸೆ!

0
405

ಮಂಡ್ಯ: ವೈದ್ಯ ವೃತ್ತಿ, ಐಆರ್‌ಎಸ್‌ ಹುದ್ದೆ ತೊರೆದು ರಾಜಕಾರಣಕ್ಕೆ ಬಂದಿದ್ದ ಡಾ.ಲಕ್ಷ್ಮಿ ಅಶ್ವಿನ್‌ಗೌಡ ಅವರನ್ನು ಜೆಡಿಎಸ್‌ ಮೂಲೆಗುಂಪು ಮಾಡಿತು. ಕಳೆದೆರಡು ವರ್ಷಗಳಿಂದ ನೋವು ನುಂಗಿಕೊಂಡಿದ್ದ ಅವರು ಬಿಜೆಪಿ ಸೇರುವುದು ಖಚಿತವಾಗಿದ್ದು ಹೊಸ ಭರವಸೆಯೊಂದಿಗೆ ಕಮಲ ಮುಡಿಯಲು ಸಜ್ಜಾಗಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಶನಿವಾರ ಲಕ್ಷ್ಮಿ ಅಶ್ವಿನ್‌ಗೌಡ ಕೇಸರಿ ಬಾವುಟ ಹಿಡಿಯಬೇಕಾಗಿತ್ತು. ಆದರೆ ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದು ಎಲ್ಲರೂ ಒಂದೇ ದಿನ ಸೇರುವ ಹೊಸ ಮಹೂರ್ತ ನಿಗದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಲಕ್ಷ್ಮಿ ಬಿಜೆಪಿ ಸೇರ್ಪಡೆಯಾಗುತ್ತಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ನಾಗಮಂಗಲ ಕ್ಷೇತ್ರದಿಂದ ಕಣಕ್ಕಿಳಿಸುವ ಭರವಸೆ ಬಿಜೆಪಿ ಮುಖಂಡರಿಂದ ಸಿಕ್ಕಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಬಿಜೆಪಿ ಸೇರುತ್ತಿರುವ ವಿಚಾರವನ್ನು ಸ್ವತಃ ಲಕ್ಷ್ಮಿ ಒಪ್ಪಿಕೊಂಡಿದ್ದಾರೆ.

‘ನಾನು ಬಿಜೆಪಿ ಸೇರುವುದು ನಿಶ್ಚಿತವಾಗಿದ್ದು ರಾಜ್ಯ, ರಾಷ್ಟ್ರಮಟ್ಟದ ಮುಖಂಡರ ಜೊತೆ ಮಾತುಕತೆಯಾಗಿದೆ. ಟಿಕೆಟ್‌, ಚುನಾವಣೆಯಲ್ಲಿ ಕಣಕ್ಕಿಳಿಸುವ ಭರವಸೆಗಳ ಯಾವುದೇ ವಿಚಾರ ಚರ್ಚೆಯಾಗಿಲ್ಲ’ ಎಂದು ಲಕ್ಷ್ಮಿ ಅಶ್ವಿನ್‌ಗೌಡ ತಿಳಿಸಿದರು.

ಮೊಮ್ಮಗಳು, ತಂಗಿ ಎಂದರು: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಸಲಹೆಯಂತೆ ಅವರು ಐಆರ್‌ಎಸ್‌ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಜೆಡಿಎಸ್‌ ಸೇರಿದ್ದರು. ದೇವೇಗೌಡರು ಅವರನ್ನು ‘ಮೊಮ್ಮಗಳು’ ಎಂದು ಕರೆದು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ‘ತಂಗಿ’ ಎಂದಿದ್ದರು. ಆದರೆ ಚುನಾವಣೆಗಳು ಬಂದಾಗ ಟಿಕೆಟ್‌ ನೀಡದ ಕಾರಣ ಲಕ್ಷ್ಮಿ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದರು.

2018ರ ಲೋಕಸಭಾ ಉಪ ಚುನಾವಣೆಯಲ್ಲಿ ಅವರು ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್‌ ವರಿಷ್ಠರು ಎಲ್‌.ಆರ್.ಶಿವರಾಮೇಗೌಡ ಅವರಿಗೆ ಟಿಕೆಟ್‌ ಕೊಟ್ಟರು. ನಂತರ ನಡೆದ ವಿಧಾನಸಬಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಆದರೆ ಆಗಲೂ ಟಿಕೆಟ್‌ ವಂಚಿತರಾದರು. ನಂತರ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲೂ ಟಿಕೆಟ್‌ ಬಯಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ಭರವಸೆ ನೀಡಿಯೇ ಅವರನ್ನು ಪಕ್ಷಕ್ಕೆ ಕರೆತರಲಾಗಿತ್ತು. ಆದರೆ ಅಂತಿಮವಾಗಿ ದೇವೇಗೌಡರು ತಮ್ಮ ಮೊಮ್ಮಗ ನಿಖಿಲ್‌ಗೆ ಟಿಕೆಟ್‌ ನೀಡಿದರು.

ವಿಚಾರಗಳಿಂದ ಗಮನ ಸೆಳೆಯುತ್ತಿದ್ದ ಲಕ್ಷ್ಮಿ ಜಿಲ್ಲೆಯಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಟಿಕೆಟ್‌ ವಂಚಿತರಾದಾಗ ಅಭಿಮಾನಿಗಳು ಅವರ ಪರ ನಿಂತಿದ್ದರು. ಜೆಡಿಎಸ್‌ ಮುಖಂಡರು ಯುವ ನಾಯಕಿಯನ್ನು ನಡುನೀರಿನಲ್ಲಿ ಕೈಬಿಟ್ಟರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಲಕ್ಷ್ಮಿಅಶ್ವಿನ್‌ಗೌಡ ಮಳವಳ್ಳಿ ಮಗಳು, ನಾಗಮಂಗಲ ತಾಲ್ಲೂಕಿನ ಸೊಸೆ, ಅವರ ಪತಿ ಐಎಎಸ್‌ ಅಧಿಕಾರಿ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ಅವರು ಐಆರ್‌ಎಸ್‌ ಹುದ್ದೆಗೆ ಆಯ್ಕೆಯಾಗಿದ್ದರು. ಸೇವೆಗೆ ಸೇರುವಷ್ಟರಲ್ಲಿ ಜೆಡಿಎಸ್‌ ಒತ್ತಾಯಕ್ಕೆ ಮಣಿದು ರಾಜಕಾರಣಕ್ಕೆ ಬಂದಿದ್ದರು.

‘ಲಕ್ಷ್ಮಿ ಅಶ್ವಿನ್‌ಗೌಡ ಅವರು ಪಕ್ಷದ ಚಟುವಟಿಕೆಯಿಂದ ದೂರವಿದ್ದರು. ಅವರು ಯಾವುದೇ ಪಕ್ಷ ಸೇರಲು ಸರ್ವ ಸ್ವತಂತ್ರರು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

ಜೆಡಿಎಸ್‌ಗೆ ವಿಚಾರ ಬೇಕಿಲ್ಲ…

‘ಜೆಡಿಎಸ್‌ ಪಕ್ಷಕ್ಕೆ ವಿಚಾರಗಳ ಮೇಲೆ ನಂಬಿಕೆ ಇಲ್ಲ, ಅವರಿಗೆ ಅವು ಬೇಕಾಗಿಯೂ ಇಲ್ಲ. ನನ್ನಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿ ಕೊನೆಗೆ ಮೋಸ ಮಾಡಿದರು’ ಎಂದು ಲಕ್ಷ್ಮಿ ಅಶ್ವಿನ್‌ಗೌಡ ಹೇಳಿದರು.

‘ಐಆರ್‌ಎಸ್‌ ಹುದ್ದೆಗೆ ನಾನು ರಾಜೀನಾಮೆ ನೀಡಿದ ನಂತರ ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೆ ಹುದ್ದೆ ಕೊಡಿಸುವ ಮಾತು ಹೇಳಿದ್ದರು, ನನಗೆ ಅದು ಬೇಕಿರಲಿಲ್ಲ. ಈಗಲೂ ಹೊಸ ಮಹತ್ವಾಕಾಂಕ್ಷೆಯೊಂದಿಗೆ ಬಿಜೆಪಿ ಸೇರುತ್ತಿದ್ದೇನೆ’ ಎಂದರು.

LEAVE A REPLY

Please enter your comment!
Please enter your name here