ಬೆಂಗಳೂರು: ಯಡಿಯೂರಪ್ಪನವರೇ ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ. ನನ್ನ ತಂಟೆಗೆ ಬಂದರೆ ಹುಷಾರ್​! ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ನಾನು ವೈಯಕ್ತಿಕ ಸಿಡಿಗಳನ್ನ ಇಟ್ಕೊಂಡು ರಾಜಕಾರಣ ಮಾಡೋದಿಲ್ಲ. ನಾನು ರಾಜಕೀಯವಾಗಿ ಬಳಸಿಕೊಳ್ಳುವ ದಾಖಲೆಗಳೇ ಬೇರೆ. ಯಡಿಯೂರಪ್ಪ ಕಳ್ಳರು ಮತ್ತು ದರೋಡೆಕೋರರನ್ನ ಸೇರಿಸಿಕೊಂಡಿದ್ದಾರೋ ಗೊತ್ತಿಲ್ಲ. ಇದೂವರೆಗೂ ನಾನು ಮೌನವಾಗಿದ್ದೆ ಎಂದ ಕುಮಾರಸ್ವಾಮಿ, ಜೆಡಿಎಸ್‌ ಮುಗಿಸಲು ಯಡಿಯೂರಪ್ಪಗೆ ಇನ್ನೊಂದು ಜನ್ಮ ಹುಟ್ಟಿ ಬಂದರೂ ಆಗಲ್ಲ. ಅವರು ಇದೂವರೆಗೂ ನನ್ನ ಪಕ್ಷದ ತಂಟೆಗೆ ಬಂದಿಲ್ಲ. ಹಾಗಾಗಿ ಯಡಿಯೂರಪ್ಪ ಸುರಕ್ಷಿತವಾಗಿದ್ದಾರೆ ಎಂದರು.

2008ರಲ್ಲಿ ‘ದೇವೇಗೌಡರೇ ಅಪ್ಪ, ಮಕ್ಕಳನ್ನ ಮುಗಿಸುತ್ತೇವೆ’ ಎಂದಿದ್ದರು.

ಬಳಿಕ ರಾಜಕಾರಣದಲ್ಲಿ ಏನೆಲ್ಲಾ ಆಯ್ತು. ಮೂವರು ಸಿಎಂ ಬದಲಾದರು. ಜೆಡಿಎಸ್‌ ನಿರ್ಣಾಮ ಮಾಡುತ್ತೇವೆ ಎಂದವರೆಲ್ಲ ಎಲ್ಲೆಲ್ಲೋ ಹೋಗಿದ್ದಾರೆ. ಜೆಡಿಎಸ್‌ ಪಕ್ಷದ ಸುದ್ದಿಗೆ ಬರಬೇಡಿ. ನನ್ನ‌ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬೇಡಿ. ನನ್ನ ಸುದ್ದಿಗೆ ಬಂದರೆ ಸರಿ ಇರಲ್ಲ ಎಂದು ಬಿಎಸ್​ವೈಗೆ ಎಚ್​ಡಿಕೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

ಈ ಹಿಂದೆಯೂ ಯಡಿಯೂರಪ್ಪ ಹತ್ತು ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದಿದ್ದರು. ಆಮೇಲೆ ಅವರು ಎಲ್ಲಿ ಹೋದರು? ಎಂದು ಲೇವಡಿ ಮಾಡಿದ ಕುಮಾರಸ್ವಾಮಿ, ಅವನ್ಯಾರೋ ನೀರಾವರಿ ಸಚಿವ ಮಾತನ್ನಾಡಿದ್ದಾನೆ. ಸಿ.ಪಿ. ಯೋಗೇಶ್ವರ್ ಒಂಬತ್ತು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅಂತ. ಮನೆ ಮಾರಿ ಸಾಲ ಮಾಡಿ ಖರ್ಚು ಮಾಡಿದ್ದಾರಂತೆ. ನನ್ನ ಅವಧಿಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದರು. ಈಗ ಇವರೆಲ್ಲ ಎಲ್ಲಿ ಹೋದರು? ಎಂದು ಐಟಿ ಇಲಾಖೆ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.

ಈ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದಿದ್ದರು. ಇದೀಗ ಆರ್​ಎಸ್​ಎಸ್ ಮೂಲಗಳ ಪ್ರಕಾರ ಏಪ್ರಿಲ್​ಗೆ ಯಡಿಯೂರಪ್ಪ ಬದಲಾಗಲಿದ್ದಾರೆ ಎಂದಿದ್ದಾರೆ. ಹಾಗಾದರೆ ಅವರು ಆರ್​ಎಸ್​ಎಸ್​ನ ಬೀ ಟೀಮ್ ಇರಬೇಕು. ಅವರಿಗೆ ಆರ್‌ಎಸ್‌ಎಸ್ ಮೂಲಗಳಿಂದಲೇ ಗೊತ್ತಾಗುತ್ತಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯರ ಹೆಸರೇಳದೆ ಮಾತಿನಲ್ಲೇ ಕುಮಾರಸ್ವಾಮಿ ಕುಟುಕಿದ‌ರು.

LEAVE A REPLY

Please enter your comment!
Please enter your name here