ನವದೆಹಲಿ(ಜ.18) ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯ ವಾಟ್ಸ್‌ಆಪ್ ಚಾಟ್‌ಗಳು ಲೀಕ್ ಆಗಿದ್ದು, ಇದು ಮತ್ತೊಂದು ಹೊಸ ಬಗೆಯ ಸಂಘರ್ಷಕ್ಕೆ ಮಾಂದಿ ಹಾಡಿವೆ. ವಾಟ್ಸಾಪ್ ಸಂದೇಶಗಳಲ್ಲಿ ಬಾಲಾಕೋಟ್ ದಾಳಿಯ ವಿಚಾರ ಉಲ್ಲೇಖವಾಗಿದ್ದು, ಸದ್ಯ ಇದು ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿವೆ.
ಟಿಆರ್‌ಪಿ ಪ್ರಕರಣ ತನಿಖೆ ವೇಳೆ ಮುಂಬೈ ಪೊಲೀಸರು ಕಲೆ ಹಾಕಿದ್ದ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಹಾಗೂ ಹಾಗೂ ಮಾಜಿ ಬಾರ್ಕ್ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ 500 ಪುಟಗಳ ವಾಟ್ಸಾಪ್ ಚಾಟ್ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದವು. ಇವುಗಳಲ್ಲಿ ಫೆ.23ರಂದು ನಡೆದಿದ್ದ ಚಾಟ್‌ನಲ್ಲಿ ವೈಮಾನಿಕ ದಾಳಿ ಮಾದರಿಯ ದೊಡ್ಡ ದಾಳಿ ನಡೆಯಬಹುದು ಎಂಬ ಬಗ್ಗೆ ಉಲ್ಲೇಖಿಸಲಾಗಿತ್ತು. ಇಬ್ಬರ ನಡುವಿನ ಈ ಸಂಭಾಷಣೆ ಬಾಲಾಕೋಟ್ ವೈಮಾನಿಕ ದಾಳಿ ನಡೆಯುವುದಕ್ಕೂ 3 ದಿನಗಳ ಮುನ್ನವೇ ನಡೆದಿದ್ದು, ಸದ್ಯ ಇದೇ ವಿಚಾರವನ್ನಿಟ್ಟುಕೊಂಡು ಪಾಕಿಸ್ತಾನ ಭಾರತದ ವಿರುದ್ಧ ತನ್ನ ಅಸ್ತ್ರ ಪ್ರಯೋಗಿಸಿದೆ.
ಇತ್ತ ಅರ್ನಬ್‌ಗೆ ಇಂತಹ ಸೂಕ್ಷ್ಮ ವಿಚಾರಗಳ ಮಾಹಿತಿ ಹೇಗೆ ಸಿಕ್ಕಿತೆಂಬ ಪ್ರಶ್ನೆ ಹುಟ್ಟಿಕೊಂಡಿದ್ದರೆ, ಅತ್ತ ಪಾಕಿಸ್ತಾನ ಈ ಸಂದೇಶಗಳನ್ನಿಟ್ಟುಕೊಂಡು ಭಾರತದ ವಿರುದ್ಧ ಪಿತೂರಿ ಹೂಡಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿಕೆಯೊಂದನ್ನು ನೀಡಿದ್ದು, ಈ ಸಂದೇಶಗಳು ಪಾಕಿಸ್ತಾನ ಈ ಹಿಂದೆ ಬಹಿರಂಗಪಡಿಸಿದ ವಿಚಾರಗಳನ್ನು ಮತ್ತೆ ದೃಢಪಡಿಸುತ್ತಿದೆ. ಭಾರತ ನಕಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನವನ್ನು ಅವಮಾನಿಸುತ್ತಿದೆ. ಪಾಕ್ ವಿರುದ್ಧ ಉಗ್ರವಾದದ ಆರೋಪ ಹೊರಿಸುತ್ತಿದೆ. ‘ಸರ್ಜಿಕಲ್ ಸ್ಟ್ರೈಕ್’ ಮೊದಲಾದವುಗಳ ಮೂಲಕ ಜನರನ್ನು ಭಾವುಕರನ್ನಾಗಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದೆ. ಇವುಗಳನ್ನು ಆರ್‌ಎಸ್‌ಎಸ್-ಬಿಜೆಪಿ ಆಡಳಿತದ ಚುನಾವಣಾ ಲೆಕ್ಕಾಚಾರಗಳಿಗೆ ಅನುಗುಣವಾಗಿ ಪುನರಾವರ್ತಿಸಲಾಗಿದೆ’ ಎಂದಿದೆ.
ಈ ದಾಳಿ ದೇಶಕ್ಕೆ ಭರವಸೆ ತುಂಬಿದೆ.
ಇನ್ನು ಎರಡು ದಿನ ಕರ್ನಾಟಕ ಪ್ರವಾಸದಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಸರ್ಜಿಕಲ್ ಸ್ಟ್ರೈಕ್ ದೇಶದ ಜನರಲ್ಲಿ ನಮ್ಮ ದೇಶದ ಗಡಿ ಸುರಕ್ಷಿತವಾಗಿದೆ ಎಂಬ ಭರವಸೆ ಮೂಡಿಸಿವೆ. ಬಿಜೆಪಿ ನೇತೃತ್ವದ ಸರ್ಕಾರ ದೇಶದ ಆಡಳಿತ ನಡೆಸುತ್ತಿದ್ದು, ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿರುವುದರಿಂದ ಇದೆಲ್ಲಾ ಸಾಧ್ಯವಾಯಿತು’ ಎಂದಿದ್ದರು.