ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ರಾಜ್ಯದಲ್ಲಿ ನಾಳೆ ಕಾಂಗ್ರೆಸ್ ಮತ್ತು ರೈತ ಮುಖಂಡರು ರಾಜಭವನ ಚಲೋ ನಡೆಸಲು ಮುಂದಾಗಿದ್ದರು. ಆದರೆ ಈ ರಾಜಭವನ ಚಲೋ ಱಲಿಗೆ ಈವರೆಗೆ ಯಾವುದೇ ಅನುಮತಿ ನೀಡಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಕಮಲ್ ಪಂತ್.. ಱಲಿಗಾಗಿ ಅನುಮತಿ ಕೋರಿ ಪತ್ರ ಬಂದಿದೆ. ಅಧಿಕಾರಿಗಳು ಅದನ್ನು ಪರಿಶೀಲನೆ ಮಾಡುತ್ತಿದ್ದಾರೆ. ಪರಿಶೀಲಿಸಿ ಸೂಕ್ತವಾದ ನಿರ್ಣಯವನ್ನ ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ. ಕೋವಿಡ್ – 19 ನಿಯಮ ಪ್ರಕಾರ 200 ಕ್ಕಿಂತ ಜಾಸ್ತಿ ಜನ ಸೇರುವ ಹಾಗಿಲ್ಲ ಎಂದಿದ್ದಾರೆ.ಮುಂದುವರೆದು.. ಪ್ರತಿಭಟನಾಕಾರರ ಪ್ಲಾನ್ ಏನೇ ಇರಲಿ, ನಮ್ಮ ಅಧಿಕಾರಿಗಳು ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನ ವಿಮರ್ಶೆ ಮಾಡ್ತಾರೆ.
ನಮ್ಮ ಅಧಿಕಾರಿಗಳು ಎಲ್ಲವನ್ನು ನಿಭಾಯಿಸಲು ಸಮರ್ಥರಿದ್ದಾರೆ. ನಾವು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತೆ. ಎಲ್ಲರೂ ಕಾನೂನಿನಡಿಯಲ್ಲಿ ಇರಬೇಕಾಗುತ್ತದೆ. ಪರಿಶೀಲಿಸಿ ಬಂದೋಬಸ್ತ್ ಕೆಲಸ ಮಾಡಲಿದ್ದೇವೆ ಎಂದು ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.