ಮಹಾಬಲಿಪುರಮ್‌ನ ಮೊಸಳೆ ಪಾರ್ಕ್ ನಲ್ಲಿ ಜಾಗತಿಕ ಮಾರುಕಟ್ಟೆ ಯಲ್ಲಿ ಅಂದಾಜು 10 ಲಕ್ಷ ರೂ.ಗೂ ಹೆಚ್ಚಿನ ಮೌಲ್ಯವುಳ್ಳ ಅಲ್ದಬ್ರಾ ಆಮೆಯನ್ನು ಕಳವು ಮಾಡಲಾಗಿದೆ.
ಆರು ವಾರಗಳ ಹಿಂದೆಯೇ ಘಟನೆ ನಡೆದಿದ್ದು, ಆದರೆ ಇದೀಗ ಈ ಸಂಗತಿ ಬೆಳಕಿಗೆ ಬಂದಿದೆ.
ವಿಶ್ವದಲ್ಲಿ ಗಾಲಪ್‌ಗೊಸ್ ಬಳಿಕ ಅತ್ಯಂತ ದೊಡ್ಡ ಗಾತ್ರದ್ದಾದ,ಅಲ್ದಬ್ರಾ ಜಾತಿಗೆ ಸೇರಿದ ನಾಲ್ಕು ಬೃಹತ್ ಆಮೆಗಳು ಈ ಪಾರ್ಕ್ ನಲ್ಲಿದ್ದು, ಅವುಗಳ ಪೈಕಿ ಒಂದನ್ನು ಈಗ ಕಳವು ಮಾಡಲಾಗಿದೆ.
ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್ ಸೆಂಟರ್ ಫಾರ್ ಹರ್ಪಿಟಾಲಜಿನಲ್ಲಿ ಆಮೆಗಳು ಮತ್ತು ಮೊಸಳೆಗಳು ಸೇರಿದಂತೆ ನೂರಾರು ಸರೀಸೃಪಗಳಿರುವ ಮೊಸಳೆ ಪಾರ್ಕ್ ಎಂದೇ ಕರೆಯಲಾಗುವ ಪಾರ್ಕ್ ಇದಾಗಿದೆ.
ಭೂಮಿಯಲ್ಲಿ ಅತ್ಯಂತ ದೀರ್ಘಕಾಲ ಬದುಕುವ ಪ್ರಾಣಿಗಳಲ್ಲಿ ಸೇರಿರುವ ಈ ಆಮೆಗಳು ಸುಮಾರು 150 ವರ್ಷಗಳ ಆಯುಷ್ಯವನ್ನು ಹೊಂದಿದ್ದು,1.5 ಮೀ.ಗೂ ಹೆಚ್ಚು ಉದ್ದ ಮತ್ತು 200 ಕೆ.ಜಿ.ವರೆಗೆ ತೂಕವನ್ನು ಹೊಂದಿರುತ್ತವೆ. ಇನ್ನು ಕಳ್ಳತನವಾಗಿರುವ ಆಮೆಯು 80ರಿಂದ 100 ಕೆಜಿ ತೂಕದ್ದಾಗಿದ್ದು, ಕೇವಲ 50 ವರ್ಷದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಕಳ್ಳತನದ ಹಿಂದೆ ಪಾರ್ಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಕೈವಾಡವಿದೆ ಎಂದು ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪಾರ್ಕ್ ನ ಸಿಬ್ಬಂದಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.