ಬೆಂಗಳೂರು, ಜ.19: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇನ್ನೂ ಉಪಚುನಾವಣೆ ಘೋಷಣೆಯಾಗಿಲ್ಲ. ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಇನ್ನೂ ಯಾವುದೆ ಚರ್ಚೆ ಆಗಿಲ್ಲ. ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಈಗಾಗಲೆ ಸ್ಪಷ್ಟಪಡಿಸಿದ್ದೇನೆ. ಆದರೂ, ಪದೇ ಪದೇ ಮಾಧ್ಯಮಗಳಲ್ಲಿ ನನ್ನ ಹೆಸರು ಯಾಕೆ ಪ್ರಸ್ತಾಪ ಆಗುತ್ತಿದೆಯೋ ಗೊತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.ಮಂಗಳವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಲಾಗಿದ್ದ ಹೊಸ ಕೈಗಾರಿಕಾ ನೀತಿ 2020-25 ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಕೋರ್ ಕಮಿಟಿ ಸಭೆ ನಡೆದಿದೆ. ಅಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆಯಾಗಿಲ್ಲ. ಕೇವಲ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡುವ ವಿಚಾರದ ಬಗ್ಗೆಯಷ್ಟೇ ಚರ್ಚೆ ನಡೆಸಲಾಗಿದೆ ಎಂದರು.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದ ಸಂದರ್ಭದಲ್ಲಿಯೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಯಾರು ಅಭ್ಯರ್ಥಿ ಆಗಬೇಕು ಎಂಬುದರ ಬಗ್ಗೆ ಚರ್ಚೆ ಆಗಿಲ್ಲ. ಮೊದಲು ಉಪ ಚುನಾವಣೆ ಘೋಷಣೆಯಾಗಲಿ, ಆನಂತರ ಪಕ್ಷ ಹಾಗೂ ಹೈಕಮಾಂಡ್ ಅಭ್ಯರ್ಥಿ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಹಾಗೂ ಹಾಲಿ ಸಚಿವರ ಬಳಿಯಿರುವ ಖಾತೆಗಳ ಅದಲು ಬದಲು ಕುರಿತು ಹಿರಿಯ ಸಚಿವರ ಜೊತೆ ಚರ್ಚೆ ನಡೆಸುವುದಾಗಿ ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಸಚಿವರಿಗೆ ಯಾವ ಖಾತೆ ನೀಡಬೇಕು ಅನ್ನೋದನ್ನು ಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ. ಹಿರಿಯ ಸಚಿವರ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಈವರೆಗೆ ಅಂತಹ ಚರ್ಚೆ ಆಗಿಲ್ಲ. ನನ್ನ ಖಾತೆಯನ್ನು ಬದಲಾಯಿಸಲಾಗುತ್ತದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಆದರೆ, ಅದು ಕೇವಲ ಮಾಧ್ಯಮಗಳ ಸೃಷ್ಠಿಯೆ ಹೊರತು, ಸತ್ಯವಲ್ಲ ಎಂದರು.