ಬೆಂಗಳೂರು: ಉನ್ನತ ಹುದ್ದೆಯ ಆಮಿಷ ತೋರಿ ಹಲವಾರು ಗಣ್ಯರಿಗೇನೇ ಕೋಟಿ ಕೋಟಿ ಪಂಗನಾಮ ಹಾಕಿ ಈಗ ಜೈಲು ಸೇರಿದ್ದಾನೆ ಯುವರಾಜ್ ಅಲಿಯಾಸ್ ಸ್ವಾಮಿ.
ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಆ ಪಕ್ಷದ ನಾಯಕರ, ಧುರೀಣರ ಜತೆ ಫೋಟೋ ತೆಗೆಸಿಕೊಂಡು ಅವರ ಹೆಸರಿನಲ್ಲಿ ಕೋಟಿ ಕೋಟಿ ಪಂಗನಾಮ ಹಾಕುತ್ತಿರುವ ಈತನ ಮೋಸಕ್ಕೆ ಬಲಿಯಾದವರಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್ ಇಂದ್ರಕಲಾ ಅವರು ಕೂಡ ಒಬ್ಬರು.
ತನಗೆ ಬಿಜೆಪಿ ಮತ್ತು ಆರ್ಎಸ್ಎಸ್ನ ಪ್ರಮುಖ ವ್ಯಕ್ತಿಗಳು ತಿಳಿದಿದ್ದು, ತನ್ನ ಮಾತು ಎಲ್ಲೆಡೆ ನಡೆಯುತ್ತದೆ ಎಂದು ನ್ಯಾಯಮೂರ್ತಿಗೆ ತಿಳಿಸಿದ್ದ ಈ ಯುವರಾಜ, ಅವರ ಬಳಿಯಿಂದ ಸುಮಾರು ನಾಲ್ಕೂವರೆ ಕೋಟಿ ರೂಪಾಯಿ ಹಣ ವಸೂಲಿ ಮಾಡಿದ್ದಾನಂತೆ.
ನನಗೆ ಶಾಸ್ತ್ರ ನೋಡಲು ಬರುತ್ತದೆ. ಅದರ ಪ್ರಕಾರ ನೀವು ಈ ರಾಜ್ಯದ ಉನ್ನತ ಹುದ್ದೆಯನ್ನು ಏರಲಿದ್ದೀರಿ.
ಅದಕ್ಕೆ ಅವಕಾಶ ಬೇಕಷ್ಟೇ ಎಂದು ನ್ಯಾಯಾಧೀಶೆಗೇ ಮಂಕುಬೂದಿ ಎರೆಚಿರುವ ಈ ಕಳ್ಳಸ್ವಾಮಿ, ಅವರಿಂದ ಹಣವನ್ನು ಲಪಟಾಯಿಸಲು ಯಶಸ್ವಿಯಾಗಿದ್ದಾನೆ.ನನಗೆ ಮೋಸ ಮಾಡಿ ಹಣವನ್ನು ಕೇಳಿದ್ದ. ಅವನು ಕೇಳಿದಷ್ಟು ಹಣ ನನ್ನ ಬಳಿ ಇರಲಿಲ್ಲ. ಆದ್ದರಿಂದ ನಾನು ಸ್ನೇಹಿತರು, ಹಿತೈಷಿಗಳನ್ನು ಸಂಪರ್ಕಿಸಿದ್ದೆ. ನಂತರ ಅವನೇ ನೇರವಾಗಿ ಅವರೆಲ್ಲರ ಬಳಿ ಹೋಗಿ ಹಣವನ್ನು ಪಡೆದುಕೊಂಡು ಬಂದಿದ್ದಾನೆ. ಆದರೆ ಇದುವರೆಗೂ ಯಾವುದೇ ಹುದ್ದೆಯಾಗಲೀ, ಹಣವನ್ನಾಗಿ ಕೊಟ್ಟಿಲ್ಲ. ಅವನು ಮೋಸ ಮಾಡಿರುವುದು ಈಗ ತಿಳಿದಿದೆ. ಆದ್ದರಿಂದ ಈತನ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ನ್ಯಾಯಮೂರ್ತಿಯವರು ದೂರಿನಲ್ಲಿ ತಿಳಿಸಿದ್ದಾರೆ.
ನಾನು ಹಣಕ್ಕಾಗಿ ಆತನ ಮನೆಗೆ ಹೋಗಿದ್ದಾಗ ಏನೇನೋ ಸಬೂಬು ಹೇಳಿ ಸಾಗಹಾಕಿದ್ದಾನೆ. ಇದುವರೆಗೂ ಏನೂ ಕೊಡದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಅವರು ಬರೆದಿದ್ದಾರೆ.
ಇದೀಗ ಈ ನ್ಯಾಯಮೂರ್ತಿಯ ವಿರುದ್ಧವೇ ಹೈಕೋರ್ಟ್ ವಕೀಲರೊಬ್ಬರು ದೂರು ದಾಖಲು ಮಾಡಿದ್ದಾರೆ! ಇದಕ್ಕೆ ಕಾರಣ, ನ್ಯಾಯಮೂರ್ತಿಯಾಗಿದ್ದವರೊಬ್ಬರು ಉನ್ನತ ಹುದ್ದೆಯ ಆಸೆಯಿಂದ ಲಂಚ ಕೊಟ್ಟಿರುವುದು ಸರಿಯಲ್ಲ ಎಂದು ದೂರಿನಲ್ಲಿ ವಕೀಲ ಅಮೃತೇಶ್ ದೂರಿದ್ದಾರೆ.

‘ ರಾಜ್ಯಪಾಲೆಯಾಗುವ ಉದ್ದೇಶದಿಂದ 8.8 ಕೋಟಿ ರೂಪಾಯಿ ನೀಡುವ ಮೂಲಕ ಇಂದ್ರಕಲಾ ಅವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಮೃತೇಶ್ ಅವರು ಸಿಸಿಬಿ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ.ಹೈಕೋರ್ಟ್ ನ್ಯಾಯಮೂರ್ತಿಯಾಗಿ, ನಂತರ ಗ್ರಾಹಕರ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಈ ರೀತಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿರುವುದು ಉಚಿತವಲ್ಲ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.ಈ ಕುರಿತು ಎಸ್ಐ ಶಿರಾಜುದ್ದೀನ್ ಅವರಿಗೆ ದೂರು ದಾಖಲು ಮಾಡಲಾಗಿದ್ದು, ಅವರು ಈ ದೂರನ್ನು ಎಸಿಪಿ ಎಸ್.ನಾಗರಾಜ್ ಅವರಿಗೆ ತನಿಖೆಗಾಗಿ ನೀಡಿರುವುದಾಗಿ ಅಮೃತೇಶ್ ತಿಳಿಸಿದ್ದಾರೆ.