ಬೆಂಗಳೂರು, ಜ.20- ಮರಾಠಿ ಭಾಷಿಗರ ಬಾಹುಳ್ಯ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಬೇಕೆಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವ ಕನ್ನಡ ಒಕ್ಕೂಟ ಇಂದು ಮಹತ್ವದ ಸಭೆ ನಡೆಸಿತು.ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ಕೆ.ಆರ್.ಕುಮಾರ್, ಕನ್ನಡ ಅಭಿವೃದ್ಧಿ ಪ್ರಾಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿಚಂದ್ರು, ಮಂಜುನಾಥ್ ದೇವು, ಗಿರೀಶ್ ಸೇರಿದಂತೆ ಹಲವು ಮುಖಂಡರು ಸಭೆ ನಡೆಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆಯನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಿದರು.ಸಭೆಗೂ ಮುನ್ನ ಮಾತನಾಡಿದ ವಾಟಾಳ್ ನಾಗರಾಜ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕೆಲಸ ಮಾಡಿದ್ದಾರೆ.
ಮಹಾಜನ್ ವರದಿಯ ಪ್ರಕಾರ, ಸೊಲ್ಲಾಪುರ ನಮಗೇ ಸೇರಬೇಕು. ಉದ್ಧವ್ ಠಾಕ್ರೆ ಹುಚ್ಚು ಹೇಳಿಕೆಗಳನ್ನು ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ. ಇಂತಹ ಕೆಲಸವನ್ನು ಸಹಿಸಿಕೊಂಡು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದರು.ಎಲ್ಲ ಗಡಿ ಭಾಗಗಳಲ್ಲಿ ರಾಜ್ಯಾದ್ಯಂತ ಕನ್ನಡ ಒಕ್ಕೂಟದ ವತಿಯಿಂದ ಹೋರಾಟ ಹಮ್ಮಿಕೊಳ್ಳುತ್ತಿದ್ದೇವೆ. ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿದ ಕಾರಣ ಮಹಾರಾಷ್ಟ್ರದವರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಕೂಡಲೇ ಮರಾಠ ಅಭಿವೃದ್ಧಿ ನಿಗಮವನ್ನು ಹಿಂಪಡೆಯಬೇಕೆಂದು ವಾಟಾಳ್ ಆಗ್ರಹಿಸಿದರು. ನಾಡು, ನುಡಿ, ಸಂಸ್ಕøತಿಗಾಗಿ ಕನ್ನಡ ಒಕ್ಕೂಟದ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.ಸಾ.ರಾ.ಗೋವಿಂದು ಮಾತನಾಡಿ, ಸರ್ಕಾರ ಕನ್ನಡ ಭಾಷೆ, ಗಡಿ, ನೆಲ, ಜಲ ರಕ್ಷಣೆ ಮಾಡುವುದನ್ನು ನಿರ್ಲಕ್ಷಿಸಿ ಅದರ ಪರ ಹೋರಾಟ ಮಾಡುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಮಹಾರಾಷ್ಟ್ರದವರು ಇಂತಹ ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಗಡಿ ವಿವಾದ ಇತ್ಯರ್ಥಕ್ಕಾಗಿ ಮಹಾಜನ್ ವರದಿಗೆ ಒತ್ತಾಯಿಸಿದ್ದು ಮಹಾರಾಷ್ಟ್ರ. ವರದಿ ಮಂಡನೆಯಾದ ಮೇಲೆ ತಕರಾರು ತೆಗೆದಿರುವುದು ಕೂಡ ಮಹಾರಾಷ್ಟ್ರವೇ. ಈಗ ರಾಜಕೀಯ ಕಾರಣಗಳಿಗೆ ಕನ್ನಡಿಗರನ್ನು ಕೆರಳಿಸುವಂತಹ ಹೇಳಿಕೆ ನೀಡುತ್ತಿರುವುದನ್ನು ಖಂಡಿಸುತ್ತೇವೆ ಎಂದರು.ನಾಳೆಯಿಂದ ರಾಜ್ಯದ ಎಲ್ಲ ಗಡಿಗಳನ್ನೂ ಬಂದ್ ಮಾಡಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ನಾಳೆ ಪ್ರಥಮವಾಗಿ ಹೊಸೂರು ರಸ್ತೆಯ ಅತ್ತಿಬೆಲೆ ಬಳಿ ಪ್ರತಿಭಟನೆ ನಡೆಸಲಾಗುವುದು. ನಾಡಿದ್ದು ಬೆಳಗಾವಿ ಹಾಗೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.