1950ನೇ ಇಸವಿಯ ಜನವರಿ 26. ಇದು ವೈವಿಧ್ಯತೆಗಳ ದೇಶಕ್ಕೆ ಏಕತೆ ಇರುವ ಸೂಕ್ತ ವ್ಯವಸ್ಥೆಯ ಚೌಕಟ್ಟನ್ನು ಅಂಗೀಕರಿಸಿದ ದಿನ. ಈ ದಿನದ ಸೊಬಗು ಅಷ್ಟಿಷ್ಟಕ್ಕೆ ಮುಗಿಯೋದು ಇಲ್ಲ. ಇದು ಭಾರತೀಯನೊಬ್ಬ ದಿನವೂ ಸಂಭ್ರಮ ಪಡುವ ದಿನವಾಗಿದೆ.

ಬ್ರಿಟಿಷ್ ದಾಳಿಯ ಮೂಲಕ ನಲುಗಿಹೋಗಿದ್ದ ಭಾರತೀಯ ವ್ಯವಸ್ಥೆ, ಬಹುತೇಕ ಸರ್ವಾಧಿಕಾರಿ ಆಡಳಿತದಂತಿತ್ತು. ದಾಸ್ಯದಲ್ಲಿ ಬದುಕುತ್ತಿದ್ದ ಭಾರತೀಯರು, ಅಧಿಕಾರ ಬಿಡಿ, ತಮ್ಮ ಮಾನವ ಜನ್ಮದ ಹಕ್ಕು ಚಲಾವಣೆಗೂ ಕಷ್ಟಪಡುವಂತಿತ್ತು.ಅಂಥದ್ದರಲ್ಲಿ ಸ್ವಾತಂತ್ರ ನಂತರ ಸಂವಿಧಾನ ಶಿಲ್ಪಿಯಾಗಿ ಪ್ರಜಾಪ್ರಭುತ್ವ ಸಿದ್ಧಾಂತದಲ್ಲಿ ಸಂವಿಧಾನವನ್ನು ರಚಿಸಿಕೊಟ್ಟವರು ಡಾ. ಬಿ. ಆರ್. ಅಂಬೇಡ್ಕರ್. ಅವರು ಅಂದು ಕಲ್ಪಿಸಿಕೊಟ್ಟ ವ್ಯವಸ್ಥೆ ಇಂದು ಭಾರತವು ವಿಶ್ವದಲ್ಲೇ ಗುರುತಿಸಿಕೊಳ್ಳಲು ಕಾರಣವಾಗಿದೆ.

ಹಲವು ಧರ್ಮಗಳಿರುವ, ಜಾತಿ, ಪಂಗಡ, ಕುಲಗಳಿರುವ ದೇಶಕ್ಕೆ, ಎಲ್ಲರನ್ನೂ ಒಗ್ಗೂಡಿಸಿ ಬಾಳುವ ಸಂವಿಧಾನವೊಂದನ್ನು ರೂಪಿಸಿ, ಅದೇ ಮಾರ್ಗದಲ್ಲಿ ಬಾಳುವ ಮಾರ್ಗದರ್ಶನ ನೀಡಿರುವುದರಿಂದ ಭಾರತ ಇಂದು ಕೂಡ ಗಣರಾಜ್ಯ ದಿನವನ್ನು ಸ್ಮರಿಸುತ್ತಿದೆ.ಹುಟ್ಟಿನಿಂದ ಸಾವಿನ ವರೆಗೂ ಸಂರಕ್ಷಿಸಲ್ಪಡುವ ಮಾನವ ಹಕ್ಕುಗಳು, ಕಾನೂನು ರಕ್ಷಣೆ, ಕಾನೂನು ಮುಖಾಂತರ ಸ್ವಾಭಿಮಾನದಿಂದ ಬಾಳುವ ಹಕ್ಕನ್ನು ಈ ಸಂವಿಧಾನ ಒದಗಿಸಿದೆ. ಇದರಿಂದಾಗಿ ಮಾನವೀಯತೆ, ಮಾನವೀಯ ಮೌಲ್ಯಗಳಿಗೆ ಭಾರತೀಯರಲ್ಲಿ ಬೆಲೆ ಹೆಚ್ಚು. ಇದಕ್ಕೆ ಕಾರಣ ಭಾರತೀಯರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವುದು.

ಇಂದು ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಗೂ ಆಡಳಿತದ, ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶವಿದೆ. ಅತೀ ಸಣ್ಣ ಹುದ್ದೆಯಿಂದ ಮೊದಲಾಗಿ, ರಾಷ್ಟ್ರಪತಿ ಹುದ್ದೆಯವರೆಗೂ ಎಲ್ಲಾ ಜಾತಿ, ಧರ್ಮ, ಪಂಗಡದ ವ್ಯಕ್ತಿಗಳು ಇದ್ದರೆ ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕಾರಣ. ನಾಗರಿಕತೆ ಬೆಳೆಯುತ್ತಾ ಕಾಲಕ್ಕೆ ತಕ್ಕ ಬದಲಾವಣೆಗಳೂ ಪ್ರಜಾಪ್ರಭುತ್ವದ ಸೊಬಗು ಆಗಿದೆ.

ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತೀಯರ ಜೀವನ ಶೈಲಿಯನ್ನು ಬ್ರಿಟಿಷ್ ದಾಸ್ಯದ ಆಡಳಿತದಿಂದ ಹೊರಗಿಟ್ಟಿದೆ. ಪ್ರಜೆಗಳೇ ಪ್ರಭುಗಳಾಗಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಪಾಲು ಸಿಗುವಂತೆ ಆಗಿದೆ. ಸಣ್ಣ ಪುಟ್ಟ ತೊಡಕು ಗಳಿಂದ ಮತ್ತು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಜೊತೆಗೆ ಮುಂದೆ ಸಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬದುಕಿ ಬಾಳುತ್ತಿರುವುದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ.





ನಮ್ಮೆಲ್ಲ ಓದುಗ ಮಿತ್ರರಿಗೆ ಗಣರಾಜ್ಯೋತ್ಸವದ ಶುಭಾಶಯಗಳು.