ಗ್ರಾಮ ಪಂಚಾಯ್ತಿ ನೂತನ ಸದಸ್ಯರು ಕಾಯ್ದೆ ಪುಸ್ತಕವನ್ನು ಓದಿ ತಿಳಿದುಕೊಳ್ಳಬೇಕು. ಇಲ್ಲವಾದರೆ ಯಾರೋ ತಿಂದು ನಿಮ್ಮೆಲ್ಲರ ಮೂತಿಗೆ ಒರೆಸಿ ಹೋಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಎಚ್ಚರಿಸಿದರು.
ಅವರು ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ತಾಲೂಕಿನ ವಿವಿಧ ಗ್ರಾ.ಪಂ.ಗಳಿಗೆ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಮಾದರಿಯಾಗುವ ಸಂಕಲ್ಪ ಮಾಡಿ
ಆಡಳಿತದಲ್ಲಿ ಅನುಭವ ಪಡೆದುಕೊಳ್ಳಬೇಕು. ನೀವು ಮಾಡುವ ಕೆಲಸ, ನಡೆದುಕೊಳ್ಳುವ ರೀತಿ ಮೇಲೆ ಭಾರತೀಯ ಜನತಾಪಕ್ಷ ಏನೆಂಬುದನ್ನು ಜನರು ಅಳತೆ ಮಾಡುತ್ತಾರೆ. ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ತಾಳ್ಮೆಯಿಂದ ಕೆಲಸ ಮಾಡಬೇಕು. ನನ್ನ ಗ್ರಾಮ ನನ್ನ ಪಂಚಾಯ್ತಿ ಎನ್ನುವ ಅಭಿಮಾನ ಇಟ್ಟುಕೊಂಡು ತಾನೂ ಮಾದರಿಯಾಗುತ್ತೇನೆ ಎನ್ನುವ ಸಂಕಲ್ಪ ಮಾಡಬೇಕು ಎಂದರು.
ಬಾಗಿದವರು ಉಳಿಯುತ್ತಾರೆ
ಗೆದ್ದವರು ಬೀಗಬಾರದು, ಬಾಗಬೇಕು. ಬೀಗಿದವರು ಬೀಳುತ್ತಾರೆ ಬಾಗಿದವರು ಉಳಿಯುತ್ತಾರೆ. ಪ್ರಜಾಪ್ರಭುತ್ವದ ಬೇರು ಪಂಚಾಯ್ತಿ ಮಟ್ಟದಲ್ಲಿ ಆಳವಾಗಿ ಊರಬೇಕು. ಅಪಹಾಸ್ಯ ಮಾಡುವವರಿಗೂ ಗೌರವ ಹಾಗೂ ದಿಟ್ಟತನದ ವ್ಯಕ್ತಿತ್ವ ಪರಿಚಯ ಆಗುವಂತೆ ಮಾಡಬೇಕು. ಗ್ರಾಮ ಪಂಚಾಯ್ತಿಗಳು ರಾಜಕೀಯ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಅಖಾಡವಾಗಲಿ. ಗ್ರಾಮೀಣ ನಾಯಕತ್ವ ಬೆಳೆಯಲಿ ಎಂದು ಆಶಿಸಿದರು.

ಪ್ರೀತಿಯಿಂದ ಗೆಲ್ಲಬೇಕು
ಚುನಾವಣೆ ಸಂದರ್ಭದಲ್ಲಿ ಜಿದ್ದಾಜಿದ್ದಿ ಇದ್ದೇ ಇರುತ್ತದೆ. ಎಲ್ಲರನ್ನು ಪ್ರೀತಿಯಿಂದ ಗೆಲ್ಲಬೇಕು. ಚುನಾವಣೆಯಲ್ಲಿ ಸೋತವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮವರನ್ನಾಗಿಸಿಕೊಳ್ಳಬೇಕು. ನೀವು ಮಾಡುವ ಅಭಿವೃದ್ಧಿ ಯೋಜನೆಗೆ ಶಾಸಕನಾಗಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಬೆನ್ನೆಲುಬಾಗಿ ನಿಂತು ನಿಮ್ಮ ಗೌರವ ಹೆಚ್ಚಿಸುವ ಕೆಲಸ ನಾವು ಮಾಡುತ್ತೇವೆ.
ಸ್ವಜನ ಪಕ್ಷಪಾತಕ್ಕೆ ಅವಕಾಶ ಬೇಡ. ಅದು ಕೆಟ್ಟ ಹೆಸರನ್ನು ತರುತ್ತದೆ. ಪರಸ್ಪರ ಕಿತ್ತಾಟ ಬೇಡ. ಕೂಡಿ ಆಡಳಿತ ನಡೆಸಿ ಎಂದರು.

ಅನುಭವದ ಕೊರತೆ ನಮಗೂ ಇತ್ತು
ನಾನು ಬಾವುಟ ಕಟ್ಟಿ ಬೆಳೆದವನು. ಸ್ಟೈಕ್ ಮಾಡಿಕೊಂಡು ರಾಜಕೀಯಕ್ಕೆ ಬಂದವನು. ಆರಂಭದಲ್ಲಿ ಅನುಭವದ ಕೊರತೆಯಿಂದಾಗಿ ಸೀಮೆಎಣ್ಣೆ ಸುರಿದುಕೊಳ್ಳುವುದು, ಜೆ.ಸಿ.ಬಿ. ಮುಂದೆ ಮಲಗುವಂತಾಯಿತು. ನಂತರ ನಾನು, ಸುನೀಲ್‍ಕುಮಾರ್ ಇಬ್ಬರು ಶಾಸಕರಾದೆವು. ಇಬ್ಬರೂ ಪೈಪೋಟಿ ಮೇಲೆ ಸಿಎಂ ಬಳಿ ತೆರಳಿ ಸಹಿ ಹಾಕಿಸುತ್ತಿದ್ದೆವು. ನಂತರವೇ ಗೊತ್ತಾಗಿದ್ದು ಅಷ್ಟಕ್ಕೆ ಅನುದಾನ ಬರುವುದಿಲ್ಲ. ಸಾಕಷ್ಟು ಪ್ರಕ್ರಿಯೆ ಇರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಲು ಒಂದು ವರ್ಷ ಬೇಕಾಯಿತು ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಕ್ಕಳ ಉನ್ನತ ವ್ಯಾಸಂಗಕ್ಕೆ ಕೇಂದ್ರ ಸರ್ಕಾರ 1100 ಕೋಟಿ ರೂ. ಹಣ ಮೀಸಲಿಟ್ಟಿದೆ. ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಇದು ಶೇ.50 ಹೆಚ್ಚಾಗಿದೆ. ಕಿಸಾನ್ ಸಮ್ಮಾನ್, ಸಾಯಿಲ್ ಹೆಲ್ತ್ ಕಾಡ್ತ್‍ನಂತಹ ಯೋಜನೆಯಿಂದ ಗ್ರಾಮೀಣ ಸಮುದಾಯವನ್ನು ಉನ್ನತೀಕರಗೊಳಿಸುವುದರ ಜೊತೆಗೆ ರೈತರ ಆದಾಯ ದುಪ್ಟಟ್ಟಾಗಬೇಕೆನ್ನುವ ಕಾರಣಕ್ಕೆ ಕೃಷಿ ಮಸೂದೆ ಜಾರಿಗೆ ತಂದಿದೆ. ನಾವು ಬೆಳೆದ ಉತ್ಪನ್ನಕ್ಕೆ ಎಲ್ಲಿ ಹೆಚ್ಚು ಬೆಲೆ ಸಿಗುತ್ತದೆ ಅಲ್ಲಿ ಮಾರಾಟ ಮಾಡುವುದು ತಪ್ಪೇ ಎಂದು ಪ್ರಶ್ನಿಸಿದ ಅವರು. ಅದರ ವಿರುದ್ಧ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇಂತಹ ಹಲವು ಬಂಧoನಗಳಿಂದ ರೈತರನ್ನು ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಆದರೆ ಅವರನ್ನು ಬಂಧನದಲ್ಲೇ ಇಡಬೇಕೆಂದು ಕೆಲವರು ಚಳುವಳಿಗೆ ಮುಂದಾಗಿದ್ದಾರೆ ಎಂದು ದೂರಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಈಶ್ವರಳ್ಳಿ ಮಹೇಶ್ , ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರೇಂಕುಮಾರ್ ಮಾತನಾಡಿದರು.
ಜಿ.ಪಂ. ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್, ತಾ.ಪಂ. ದಾಕ್ಷಾಯಿಣಿ ಪೂರ್ಣೇಶ್, ಜಿ.ಪಂ. ಸದಸ್ಯರುಗಳಾದ ಬೆಳವಾಡಿ ಮಹೇಂದ್ರ, ಜಸಂತ ಅನಿಲ್‍ಕುಮಾರ್, ಹಿರಿಗಯ್ಯ, ವಿಜಯಕುಮಾರ್, ಗ್ರಾ.ಪಂ.ಚುನಾವಣಾ ಪ್ರಭಾರಿ ಎಚ್.ಡಿ.ತಮ್ಮಯ್ಯ, ನಿರಂಜನ್, ನಗರ ಬಿಜೆಪಿ ಅಧ್ಯಕ್ಷ ಮಧುಕುಮಾರ್ ರಾಜ ಅರಸ್ ಇತರರು ಉಪಸ್ಥಿತರಿದ್ದರು.

1 COMMENT

LEAVE A REPLY

Please enter your comment!
Please enter your name here