ಕರಾವಳಿಯ ಐಟಿ ಉದ್ಯೋಗಿಗಳು ವಿದೇಶಗಳು ಮತ್ತು ಮಹಾನಗರಗಳಿಗೆ ವಲಸೆ ಹೋಗುವ ಬದಲಿಗೆ ತಮ್ಮ ಊರುಗಳಲ್ಲೇ ಕೆಲಸ ಮಾಡಲು ಹೆಚ್ಚು ಉತ್ಸುಕರಾಗಿದ್ದಾರೆ. ಇಂತಹದ್ದೊಂದು ಅಂಶ ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ನಡೆಸಿದ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ. ಇದು ಮಂಗಳೂರು ಒಳಗೊಂಡಂತೆ ಕರಾವಳಿಯಲ್ಲಿ ಐಟಿ ಉದ್ಯಮ ಬೆಳವಣಿಗೆಗೆ ಪೂರಕವಾಗಬಹುದೆಂದು ಭಾವಿಸಲಾಗಿದೆ.
ಜನಸಾಮಾನ್ಯರಿಗೆ ಮಂಗಳೂರಿನಲ್ಲಿ ಐಟಿ ವೃತ್ತಿಪರರ ನಿಲುವಿನ ಬಗ್ಗೆ ಇರುವ ಚಿಂತನೆಗಿಂತ ವ್ಯತಿರಿಕ್ತವಾದ ನಿಲುವು ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಕೆಸಿಸಿಐ ಹಾಗೂ ಕೆಲವು ಐಟಿ ಕಂಪೆನಿಗಳ ಸಹಯೋಗದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಡಿ. 9ರಿಂದ 19ರ ವರೆಗೆ 10 ದಿನಗಳ ಕಾಲ ಸಮೀಕ್ಷೆ ಕೈಗೊಳ್ಳಲಾಗಿದ್ದು,2240 ಮಂದಿ ಇದರಲ್ಲಿ ಭಾಗವಹಿಸಿದ್ದಾರೆ. ಈ ಜಿಲ್ಲೆಗಳಲ್ಲಿ ಉದ್ಯೋಗದಲ್ಲಿರದ 1558ಮಂದಿ ಇದರಲ್ಲಿ ಸೇರಿದ್ದಾರೆ. ಶೇ.28 ಮಂದಿ ದ.ಕ., ಉಡುಪಿಯಲ್ಲಿರುವವರು ತಮ್ಮ ನಗರದ ಜೀವನಮಟ್ಟದ ಬಗ್ಗೆ ಖುಷಿಯಲ್ಲಿದ್ದರೆ ಶೇ. 53ರಷ್ಟು ಮಂದಿ ಸುಧಾರಣೆಯಾಗಬೇಕು ಎಂದಿದ್ದಾರೆ. ಐಟಿ ಪದವೀಧರರು ಮಂಗಳೂರಿನಲ್ಲಿರುವುದಕ್ಕೆ ಇಷ್ಟ ಪಡುವುದಿಲ್ಲ ಎನ್ನುವುದು ಸಾಮಾನ್ಯವಾದ ನಂಬಿಕೆ. ಆದರೆ ಸಮೀಕ್ಷೆಯ ಪ್ರಕಾರ ಶೇ.93ರಷ್ಟು ಪದವೀಧರರು ಇಲ್ಲೇ ಇರುವುದಕ್ಕೆ ಸಿದ್ಧರಿದ್ದಾರೆ.
ಇದಕ್ಕೆ ಪೂರಕವಾಗಿ ಇಲ್ಲಿ ಐಟಿ ಉದ್ಯಮ ಬೆಳವಣಿಗೆಯನ್ನು ಅವರು ನಿರೀಕ್ಷಿಸುತ್ತಿದ್ದಾರೆ. ಐಟಿಯಲ್ಲಿನ ಮ್ಯಾನೇಜರ್‌ಗಳು, ಕುಶಲ ವೃತ್ತಿಪರರು ಇಲ್ಲಿ ಕೆಲಸ ಮಾಡಲು ಬಯಸುವುದಿಲ್ಲ ಎನ್ನುವುದು ಇನ್ನೊಂದು ಸಾಮಾನ್ಯ ನಂಬಿಕೆ, ಅದನ್ನೂ ಸಮೀಕ್ಷೆ ಹುಸಿಗೊಳಿಸಿದೆ. ಶೇ.95ರಷ್ಟು ಮಂದಿ ಈಗ ಮ್ಯಾನೇಜರ್, ಡಾಟಾ ಅನಲಿಸ್ಟ್ ಆಗಿರುವವರಿಗೂ ಮಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಇದೆ.
ಪಬ್ ಕಲ್ಚರ್‌ಗೆ ಬೆನ್ನು ಮಾಡಿರುವ ಇಂದಿನ ಯುವ ಸಮುದಾಯ! ಬೆಂಗಳೂರಿಗೆ ಹೋಲಿಸಿದರೆ ಪಬ್ ಕಲ್ಚರ್ ಅಷ್ಟಾಗಿ ಇಲ್ಲದ ನಗರ ಮಂಗಳೂರು, ಉಡುಪಿ. ಹಾಗಾಗಿ ಇಲ್ಲಿ ಐಟಿಯವರಿಗೆ ಆಕರ್ಷಣೆ ಇಲ್ಲ ಎನ್ನುವ ಮತ್ತೊಂದು ನಂಬಿಕೆಯೂ ಸಮೀಕ್ಷೆಯಿಂದ ಹುಸಿಯಾಗಿದೆ. ಸಮೀಕ್ಷೆಯ ಪ್ರಕಾರ, ಮನೋರಂಜನೆ ಎನ್ನುವುದು ಅತ್ಯಂತ ಕಡಿಮೆ ರೇಟಿಂಗ್(ಶೇ 34.3) ಪಡೆದಿದೆ. ಶೇ. 74.76 ರಷ್ಟು ಮಂದಿಗೆ ವೃತ್ತಿ ಹಾಗೂ ಕುಟುಂಬವನ್ನು ಸಮತೋಲನದಲ್ಲಿರಿಸುವುದೇ ಆದ್ಯತೆಯಾಗಿದ್ದರೆ ಶೇ 68.30 ಮಂದಿಗೆ ವೃತ್ತಿಬದುಕಿನ ಅವಕಾಶಗಳು ಆದ್ಯತೆ. ಶೇ 67 ಮಂದಿಗೆ ತಮ್ಮ ಕುಟುಂಬ, ಹೆತ್ತವರೊಂದಿಗೆ ಇರುವುದು ಆದ್ಯತೆ. ದೊಡ್ಡ ನಗರದಲ್ಲಿ ಪ್ರಸ್ತುತ ಇರುವ ಐಟಿ ಮಂದಿ ಮಂಗಳೂರಿಗೆ ಬರುವುದಕ್ಕೆ ಆಸಕ್ತಿ ತೋರುವುದಿಲ್ಲ ಎನ್ನುವ ಮತ್ತೊಂದು ಊಹೆ ಇದೆ. ಆದರೆ ಶೇ.87 ರಷ್ಟು ಹೊರಗಿರುವ ಮಂದಿಯೂ ಉತ್ತಮ ಅವಕಾಶ ಸಿಕ್ಕಿದರೆ ಮಂಗಳೂರಿನತ್ತ ಮುಖ ಮಾಡುವುದಕ್ಕೆ ಸಿದ್ಧರಿದ್ದಾರೆ. ಅದರಲ್ಲೂ ವಿದೇಶದಲ್ಲಿ ನೆಲೆಸಿರುವ ಶೇ.36ರಷ್ಟು ಮಂದಿಗೆ ಮಂಗಳೂರಿಗೆ ಬರಲು ಆಸಕ್ತಿ ಇದೆ ಎನ್ನುವ ಆಸಕ್ತಿದಾಯಕ ಅಂಶವೂ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಊರಿನ ಸಮೀಪವೇ ವೃತ್ತಿ ಮಾಡುವ ಅಪೇಕ್ಷೆ: ಶೇ.94ರಷ್ಟು ಪದವೀಧರರಿಗೆ ದೊಡ್ಡ ನಗರಗಳಿಗೆ ವಲಸೆ ಹೋಗುವ ಬದಲಿಗೆ ತಮ್ಮ ಊರಿನ ಸಮೀಪವಿರುವ ನಗರಗಳಲ್ಲೇ ಕೆಲಸ ಮಾಡುವ ಅಪೇಕ್ಷೆಯಿದೆ. ಇದು ಕೇವಲ ಕೆಳಮಟ್ಟದಲ್ಲಿ ಕೆಲಸ ಮಾಡುವ ಐಟಿ ವೃತ್ತಿಪರರಿಗೆ ಸೀಮಿತವಾಗಿಲ್ಲ. ಐಟಿ ರಂಗದಲ್ಲಿ ಉನ್ನತ ಹುದ್ದೆಗಳಲ್ಲಿರುವ ಮ್ಯಾನೇಜರ್‌ಗಳು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿದ್ದು, ಸಮೀಕ್ಷೆಯಲ್ಲಿ ಸ್ಪಂದಿಸಿದ ಶೇ.95ಮಂದಿ ತಾವು ಮಂಗಳೂರು ಅಥವಾ ಉಡುಪಿಯಂತಹ ಪ್ರದೇಶಗಳಲ್ಲಿ ಅವಕಾಶ ಲಭಿಸಿದರೆ ಕೆಲಸ ಮಾಡಲು ಸಿದ್ಧ ಎಂದಿದ್ದಾರೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಶೇ.೮೭ರಷ್ಟು ಮಂದಿ ದೊಡ್ಡ ನಗರಗಳಿಗಿಂತ ಸಣ್ಣ ನಗರ-ಪಟ್ಟಣಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ಲಭಿಸಿದರೆ ಕೆಲಸ ಮಾಡಲು ಸಿದ್ಧ ಎಂಬ ಮಾನಸಿಕತೆಯಲ್ಲಿದ್ದಾರೆ.
ಉದ್ಯೋಗ ಅಪೇಕ್ಷಿಸಲು ಇನ್ನೊಂದು ಕಾರಣ: ಅನೇಕ ಐಟಿ ಕಂಪೆನಿಗಳು ದೊಡ್ಡ ನಗರಗಳಲ್ಲಿ ಕೇಂದ್ರೀಕೃತವಾಗಿದ್ದು, ಅಲ್ಲಿ ಜೀವನನಿರ್ವಹಣಾ ವೆಚ್ಚ ಅಧಿಕವಾಗಿರುವುದನ್ನು ಈ ಐಟಿ ಉದ್ಯೋಗಿಗಳು ಬೊಟ್ಟು ಮಾಡಿದ್ದು, ಇದು ಕೂಡಾ ಅವರು ತಮ್ಮ ಊರಿನ ಬಳಿ ಉದ್ಯೋಗ ಅಪೇಕ್ಷಿಸಲು ಇನ್ನೊಂದು ಕಾರಣವೆನಿಸಿದೆ. ಕರ್ನಾಟಕ ಸ್ಟೇಟ್ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಶನ್ (ಕಿಯಾನಿಕ್ಸ್) ಈಗಾಗಲೇ ಮಂಗಳೂರಿನಲ್ಲಿ ಗುರುತಿಸಿರುವ ಭೂಮಿಯಲ್ಲಿ ಐಟಿ ಪಾರ್ಕೊಂದನ್ನು ಅಭಿವೃದ್ಧಿಪಡಿಸುವಂತೆ ಕೆಸಿಸಿಐ ಸರಕಾರವನ್ನು ಕೋರಿದೆ. ಅಲ್ಲದೆ ಈ ಸಂಬಂಧ ಸುಮಾರು 60ಕೋ.ರೂ.ಗಳ ವಿಸ್ತೃತವಾದ ಯೋಜನಾ ವರದಿಯೊಂದನ್ನೂ ಸರಕಾರಕ್ಕೆ ಸಲ್ಲಿಸಿದೆ. ಈ ಸಂಬಂಧ ಆದಾಯ ಹಂಚಿಕೆ ಮಾದರಿಯಲ್ಲಿ , ಯೋಜನೆಗೆ ತಗಲುವ ವೆಚ್ಚವನ್ನು ಕಿಯಾನಿಕ್ಸ್ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ಗಳು ಹಂಚಿ ಹಾಕಬಹುದಾಗಿದೆ ಎಂದೂ ಕೆಸಿಸಿಐ ಸಲಹೆ ಮಾಡಿದೆ.
ಮಂಗಳೂರು ನಗರದ ಆರ್ಥಿಕತೆಗೂ ಪುಷ್ಟಿ:ಮಂಗಳೂರು ಸೇರಿದಂತೆ ಕರಾವಳಿಯ ಅನೇಕ ವೃತ್ತಿಪರರು ಮಹಾನಗರಗಳಲ್ಲಿ ಮತ್ತು ವಿದೇಶಗಳಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದು, ಇವರಲ್ಲಿ ದಂಪತಿಗಳೂ ಸೇರಿದ್ದಾರೆ. ಈ ವೃತ್ತಿಪರರು ಊರಿಗೆ ಮರಳಲು ಅಪೇಕ್ಷಿಸಿದರೂ ಸ್ಥಳೀಯ ನೆಲೆಯಲ್ಲಿ ತಮ್ಮ ತಮ್ಮ ತಜ್ಞತೆಗೆ ಅನುಗುಣವಾದ ಹುದ್ದೆ ಅಥವಾ ಉದ್ಯೋಗಾವಕಾಶಗಳು ಇಲ್ಲಿ ಇಲ್ಲದಿರುವುದು ಅವರಿಗೆ ಸವಾಲಾಗಿದೆ.ಈ ಹಿನ್ನೆಲೆಯಲ್ಲಿ ಬಸ್ಸು,ರೈಲು, ವಿಮಾನ ಸಂಪರ್ಕ ಸಹಿತ ಮೂಲಸೌಕರ್ಯಗಳನ್ನು ಹೊಂದಿರುವ ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣವಾಗಬೇಕೆಂಬ ಬೇಡಿಕೆ ಹೆಚ್ಚುತ್ತಿರುವಾಗಲೇ ಈ ಸಮೀಕ್ಷಾ ವರದಿ ಗಮನ ಸೆಳೆದಿದೆ.ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಾಣದಿಂದ ಕರಾವಳಿಯ ಆರ್ಥಿಕ ಚಟುವಟಿಕೆಗಳಿಗೂ ಭಾರೀ ಉತ್ತೇಜನ ಲಭಿಸುವುದರಲ್ಲಿ ಸಂಶಯವಿಲ್ಲ. ಸರಕಾರ ಈ ನಿಟ್ಟಿನಲ್ಲಿ ಆದ್ಯತೆಯ ನೆಲೆಯಲ್ಲಿ ಗಮನಹರಿಸಬೇಕಾಗಿದೆ.
ಈಗಾಗಲೇ ಮನವಿ ಸಲ್ಲಿಸಲಾಗಿದೆ:ಮಂಗಳೂರಿನಲ್ಲಿ ಐಟಿ ಪಾರ್ಕ್ ಆದರೆ ಕೆಲಸ ಮಾಡಲು ಉದ್ಯೋಗಿಗಳು ಸಿಗಲಾರರು ಎಂಬ ಮಾತುಗಳಿದ್ದವು. ಕೆಸಿಸಿಐ ನಡೆಸಿದ ಸಮೀಕ್ಷೆಯಲ್ಲಿ ಇದು ತಪ್ಪು ಮಾಹಿತಿ ಎಂಬುದು ಬಹಿರಂಗವಾಗಿದೆ. ಮಂಗಳೂರು ಸುತ್ತಲೂ ಇರುವ 150 ಐಟಿ ಉದ್ದಿಮೆಗಳನ್ನು ಗುರಿಯಾಗಿರಿಸಿ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆ ಮೂಲಕ ಮಂಗಳೂ ರಿನಲ್ಲಿ ಐಟಿ ಪಾರ್ಕ್ ಸ್ಥಾಪಿಸಬೇಕು ಎಂಬ ಬೇಡಿಕೆಗೆ ಬಲ ಬಂದಿದೆ. ಮಂಗಳೂರಿನಲ್ಲಿ ಐಟಿ ಪಾರ್ಕ್ ನಿರ್ಮಿಸುವ ಬಗ್ಗೆ ಸ್ಥಳೀಯ ಸಂಸದರು, ಶಾಸಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಸರಕಾರದಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಈ ಬಗ್ಗೆ ಕಿಯೋನಿಕ್ಸ್ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಸರಕಾರ ತಕ್ಷಣ ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿ, ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್ ಹೇಳಿದ್ದಾರೆ.