ನಗರದ ಕೇಂದ್ರ ಮೈದಾನ, ರೈಲ್ವೇ ನಿಲ್ದಾಣ, ಪಾರ್ಕ್, ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ದಿನವಿಡೀ ಕುಳಿತು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ನೂರಕ್ಕೂ ಅಧಿಕ ಮಂದಿಗೆ ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಶಿಸ್ತಿನ ಪಾಠ ಕಲಿಸಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣಕ್ಕೆ ಕರೆತಂದು ಅವರಿಗೆ ಎಚ್ಚರಿಕೆ ನೀಡಲಾಯಿತು.
ಮೈದಾನದ ಬಳಿ ಕೆಲವರು ಪಾನಮತ್ತರಾಗಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಾರೆ. ರಾತ್ರಿ ವೇಳೆಯೂ ನಗರದ ಎಲ್ಲೆಂದರಲ್ಲಿ ಅಪರಿಚಿತ ವ್ಯಕ್ತಿಗಳು ಕಿರುಕುಳ ನೀಡುವ ಕುರಿತ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ದಿಢೀರ್ ಕಾರ್ಯಾಚರಣೆ ಕೈಗೊಂಡಿದ್ದರು.
ಈ ಸಂದರ್ಭ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವುದು, ಅಲ್ಲಿಯೇ ಮಲಗುವುದು ಮತ್ತು ಸಾರ್ವಜನಿಕರಿಗೆ ಕಿರುಕುಳ ನೀಡುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ವಶಕ್ಕೆ ಪಡೆದ ವ್ಯಕ್ತಿಗಳನ್ನು ಅವರ ಮನೆಯವರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗುವುದು. ಮತ್ತೆ ವಿನಾಕಾರಣ ಅಡ್ಡಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.