ನಾಗ್ಪುರದಲ್ಲಿ ನಿಂತು ಚಡ್ಡಿ(ಹಾಫ್ ಪ್ಯಾಂಟ್) ಧರಿಸಿ ಫೋನ್ ಮೂಲಕ ಭಾಷಣಗಳನ್ನು ಮಾಡುವುದು ರಾಷ್ಟ್ರೀಯತೆಯಲ್ಲ. ಬದಲಾಗಿ ರೈತರ ಕಲ್ಯಾಣದ ಬಗ್ಗೆ ಮಾತನಾಡುವುದೆ ನಿಜವಾದ ರಾಷ್ಟ್ರೀಯತೆ ಎಂದು ಆರೆಸ್ಸೆಸ್ ವಿರುದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಕಾಂಗ್ರೆಸ್ ಆಯೋಜಿಸಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒಕ್ಕೂಟ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
“ರೈತರ ಬೇಡಿಕೆಗಳು ಒಕ್ಕೂಟ ಸರ್ಕಾರದಿಂದ ಬಗೆಹರಿಸಲು ಸಾಧ್ಯವಾಗದಷ್ಟು ದೊಡ್ಡ ಸಮಸ್ಯೆಯಲ್ಲ. ಕೆಲವು ಕಾಯ್ದೆಗಳನ್ನು ಹಿಂಪಡೆಯುವುದರಿಂದ ಯಾವುದೇ ತೊಂದರೆಯಿಲ್ಲ ಎಂಬುದನ್ನು ಒಕ್ಕೂಟ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಕಾನೂನುಗಳನ್ನು ಹಿಂತೆಗೆದುಕೊಂಡರೆ ನಾವು ಧನ್ಯವಾದ ಸಲ್ಲಿಸಲಿದ್ದೇವೆ. ಆದರೆ ಅವರು ಕಾನೂನು ರದ್ದುಗೊಳಿಸುವುದಿಲ್ಲ ಎಂಬ ನಿರ್ಧಾರದಲ್ಲಿ ಅಚಲವಾಗಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಾಯ್ದೆಯಲ್ಲಿ ತಿದ್ದುಪಡಿ ಮಾಡುವುದು, ಅವುಗಳನ್ನು ಹಿಂತೆಗೆದುಕೊಳ್ಳುವುದು ಅಥವಾ ತಪ್ಪನ್ನು ಒಪ್ಪಿಕೊಳ್ಳುವುದು ಇವೆಲ್ಲವೂ ನಾಯಕರ ವರ್ಚಸ್ಸನ್ನು ಹೆಚ್ಚಿಸುತ್ತದೆ. ಇದು ನಾಚಿಕೆಗೇಡಿನ ವಿಷಯವಲ್ಲ” ಎಂದು ಸಚಿನ್ ಪೈಲಟ್ ಹೇಳಿದ್ದಾರೆ.
“ತಮ್ಮ ಹಕ್ಕುಗಳಿಗಾಗಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮಾವೋವಾದಿಗಳು, ಪತ್ಯೇಕತಾವಾದಿಗಳು, ಉಗ್ರರು ಎಂದು ಕರೆಯಲಾಗುತ್ತಿದೆ. ಒಕ್ಕೂಟ ಸರ್ಕಾರದಲ್ಲಿ ರೈತರ ಕಲ್ಯಾಣಕ್ಕಾಗಿ ಯೋಚಿಸುವ ಮುಖಂಡರಿಲ್ಲದ ಕಾರಣ ಈ ರೀತಿಯಾಗಿ ಯೋಚಿಸುತ್ತಾರೆ. ರೈತರಿಗೆ ಬೆಂಬಲ ಸೂಚಿಸುವುದು ರಾಜಕೀಯವಾದರೆ ನಾವದನ್ನು ಮಾಡುತ್ತಿದ್ದೇವೆ. ನಾವು ರೈತರನ್ನು ಬೆಂಬಲಿಸುತ್ತಿದ್ದು, ಅದನ್ನು ಮುಂದುವರಿಸಲಿದ್ದೇವೆ” ಎಂದು ಹೇಳಿದ್ದಾರೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನಗಳ ವಿರುದ್ಧ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ನಲವತ್ತನೇ ದಿನಕ್ಕೆ ಕಾಲಿಟ್ಟದೆ. ಒಕ್ಕೂಟ ಸರ್ಕಾರ ಇದುವರೆಗೂ ಆರು ಬಾರಿ ರೈತರೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲವೂ ವಿಫಲವಾಗಿದೆ. ಸೋಮವಾರ(ಇಂದು) ಏಳನೇ ಸುತ್ತಿನ ಮಾತುಕತೆಗೆ ರೈತರನ್ನು ಸರ್ಕಾರ ಮತ್ತೇ ಆಹ್ವಾನಿಸಿದೆ.