ಬೆಂಗಳೂರು: ಬೀದರ್ ಜಿಲ್ಲೆಯ ಬಸವ ಕಲ್ಯಾಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇಲ್ಲಿ ನೇರ ಹಣಾಹಣಿ ನಡೆಯಲಿದೆ.
ಹಾಗಾದರೆ ಈ ಉಪ ಚುನಾವಣೆಗೆ ಅಭ್ಯರ್ಥಿಗಳು ಯಾರು ಎಂಬುದಕ್ಕೆ ಸಿಕ್ಕ ಉತ್ತರ ಬಿಜೆಪಿಯಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಅವರ ಪುತ್ರ ವಿಜಯ್ ಸಿಂಗ್.
ಕಳೆದ ಸೆಪ್ಟೆಂಬರ್ ನಲ್ಲಿ ಶಾಸಕರಾಗಿದ್ದ ನಾರಾಯಣ ರಾವ್ ಅವರ ನಿಧನದಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ಅನಿವಾರ್ಯವಾಗಿದ್ದು, ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಇಲ್ಲಿ ಕೂಡ ಕೆಲಸ ಆರಂಭಿಸಿತು. ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿರುವ ವಿಜಯೇಂದ್ರ, ಉಪ ಚುನಾವಣೆಗಳಲ್ಲಿ ಪಕ್ಷ ಗೆಲ್ಲಲು ಇದುವರೆಗೆ ಸಾಕಷ್ಟು ತಂತ್ರಗಾರಿಕೆ ಮಾಡಿಕೊಂಡು ಬಂದು ಯಶಸ್ವಿಯಾಗಿದ್ದಾರೆ.
ಕಳೆದ ನವೆಂಬರ್ ನಲ್ಲಿ ಬಸವಕಲ್ಯಾಣಕ್ಕೆ ಭೇಟಿ ನೀಡಿದ ಅವರು ಕ್ಷೇತ್ರದಲ್ಲಿ ನಿರಂತರ ಪ್ರವಾಸ ಮಾಡುತ್ತಾ ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಬಿಜೆಪಿಯಿಂದ ವಿಜಯೇಂದ್ರ ಅವರು ಅಭ್ಯರ್ಥಿ ಎಂಬುದನ್ನು ಅವರು ಮತ್ತು ಸಿಎಂ ಯಡಿಯೂರಪ್ಪ ನಿರಾಕರಿಸಿದರೂ ಕೂಡ ಪಕ್ಷದ ಆಂತರಿಕ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ತಮ್ಮ ಮಗನಿಗೆ ಟಿಕೆಟ್ ಕೊಡಿಸುವ ಉಮೇದಿನಲ್ಲಿ ಸಿಎಂ ಇದ್ದಾರೆ ಎಂದು ಹೇಳಲಾಗುತ್ತಿದೆ.
ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷ ಸಿಎಂ ಮರಾಠ ಅಭಿವೃದ್ಧಿ ಮಂಡಳಿ ಘೋಷಿಸಿ ಅದಕ್ಕೆ 50 ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ. ಹಾಗಾಗಿ ಬಿಜೆಪಿಯ ಪ್ರಮುಖ ಗುರಿ ಮರಾಠಾ ಸಮುದಾಯ, ಈ ಕ್ಷೇತ್ರದಲ್ಲಿ ಮರಾಠರು ಹೆಚ್ಚಾಗಿದ್ದಾರೆ. ಕೇವಲ ಮರಾಠರು ಮಾತ್ರವಲ್ಲದೆ, ಲಿಂಗಾಯತರನ್ನು ಕೂಡ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದ್ದು ಇದಕ್ಕಾಗಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟಲು ಬಿಜೆಪಿ ವಿಸ್ತೃತ ಯೋಜನಾ ವರದಿ ಸಿದ್ದಪಡಿಸುತ್ತಿದೆ. 15 ತಿಂಗಳ ಹಿಂದೆ ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಇಂದು ಬಸವ ಕಲ್ಯಾಣಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿ ಅದರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
2018ರಲ್ಲಿ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಅವರು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಸಾಕಷ್ಟು ಹರಿದಾಡಿತ್ತು. ನಂತರ ಅವರ ಹೆಸರನ್ನು ಕೈಬಿಡಲಾಯಿತು. ಕಳೆದ ಒಂದೂವರೆ ವರ್ಷದಲ್ಲಿ ವಿಜಯೇಂದ್ರ ಅವರು ಕೆ ಆರ್ ಪೇಟೆ, ಮಂಡ್ಯ, ಶಿರಾ ಕ್ಷೇತ್ರಗಳ ಗೆಲ್ಲುವಿಕೆಗೆ ಪ್ರಮುಖ ಕಾರಣಕರ್ತರು ಎಂದು ಬಿಂಬಿಸಲಾಗುತ್ತಿದೆ. ಸ್ಥಳೀಯ ಬಿಜೆಪಿ ನಾಯಕರು ಕೂಡ ವಿಜಯೇಂದ್ರ ಅವರು ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂದು ಬಯಸುತ್ತಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯನ್ನು ಹುಡುಕುತ್ತಿದೆ. ನಾರಾಯಣ ರಾವ್ ಅವರ ಪತ್ನಿ ಮತ್ತು ವಿಜಯ್ ಸಿಂಗ್ ಅವರ ಹೆಸರುಗಳು ಪ್ರಮುಖವಾಗಿವೆ