ನಾನು ಯಾರಿಗೂ ಸಚಿವ ಸ್ಥಾನದ ಭರವಸೆ ಕೊಟ್ಟಿಲ್ಲ:BSY

0
395

ಬೆಂಗಳೂರು,ಜ.6- ನಾನು ಯಾರೊಬ್ಬರಿಗೂ ಸಚಿವರಾಗುತ್ತೀರಿ ಎಂದು ಭರವಸೆ ಕೊಟ್ಟಿಲ್ಲ. ಕೆಲವರು ಹಾಗೆ ಹೇಳಿದರೆ ನಾನೇನು ಮಾಡಲು ಸಾಧ್ಯ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದ್ದಾರೆ. ಬಸವಕಲ್ಯಾಣಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಂಥವರೇ ಸಚಿವರಾಗುತ್ತಾರೆ ಎಂದು ಯಾರೊಬ್ಬರಿಗೂ ಭರವಸೆ ಕೊಟ್ಟಿಲ್ಲ.

ಇನ್ನೆರಡು ದಿನಗಳಲ್ಲಿ ಮಂತ್ರಿಯಾಗುತ್ತೀರಿ ಎಂದು ಯಾರಿಗೂ ಹೇಳಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಕೇಂದ್ರ ನಾಯಕರು ಯಾವಾಗ ಆಗಬೇಕು ಎಂಬುದನ್ನು ತೀರ್ಮಾನಿಸುತ್ತಾರೆ.

ಅವರು ಸೂಚನೆ ಕೊಟ್ಟ ತಕ್ಷಣ ನಾನು ವಿಸ್ತರಣೆ ಮಾಡುತ್ತೇನೆ. ಅಲ್ಲಿಯವರೆಗೂ ಕಾಯಬೇಕು ಎಂದರು.

ಒಂದಿಬ್ಬರು ಹೇಳಿಕೆ ಕೊಟ್ಟರೆ ನಾನೇಕೆ ಅದಕ್ಕೆ ಪ್ರತಿಕ್ರಿಯೆ ಕೊಡಲಿ. ಸಂಪುಟ ವಿಸ್ತರಣೆ ಕುರಿತಂತೆ ಸೂಕ್ತ ಕಾಲದಲ್ಲಿ ನಿರ್ಣಯವಾಗಲಿದೆ ಎಂದರು. ಇಂದು ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇನೆ. ಇದು ಆ ಭಾಗದ ಜನತೆಯ ಬಹುದಿನಗಳ ಕನಸಾಗಿತ್ತು. ಇಂದು ನನಸಾಗುವ ಸಮಯ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರತಿಮೆ ನಿರ್ಮಾಣ ಕಾಮಗಾರಿ ಆದಷ್ಟು ಶೀಘ್ರ ಆಗಬೇಕು. ಈಗಾಗಲೇ ಅದಕ್ಕೆ ನೂರು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ 200 ಕೋಟಿ ಬಿಡುಗಡೆ ಮಾಡುತ್ತೇನೆ. ಎರಡು ವರ್ಷದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಬಸವಣ್ಣನವರ ಪ್ರತಿಮೆ ನಿರ್ಮಾಣ ಕಾಮಗಾರಿ ಶೀಘ್ರವಾಗಿ ನೆರವೇರಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಾಗಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆದಷ್ಟು ಶೀಘ್ರ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಸಿಎಂ ಹೇಳಿದರು.

LEAVE A REPLY

Please enter your comment!
Please enter your name here