ಬೆಂಗಳೂರು, ಜ.6- ಮುಂದಿನ ವಿಧಾನಸಭೆ ಚುನಾವಣೆಗೆ ಮಿಷನ್-150 ಗುರಿ ಇಟ್ಟುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅದಕ್ಕೆ ತಕ್ಕಂತೆ ಕಾಂಗ್ರೆಸನ್ನು ನಾಯಕತ್ವ ಆಧಾರಿತ ಪಕ್ಷದಿಂದ ಕೇಡರ್ ಬೇಸ್ಡ್ ಪಕ್ಷವಾಗಿ ಪರಿವರ್ತಿಸಲು ಇಂದಿನಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ. 150 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಧ್ಯೇಯೋದ್ದೇಶ ಹೊಂದಿರುವ ಕಾಂಗ್ರೆಸ್ ಅದಕ್ಕಾಗಿ ಗೆಲುವು ಸಾಧ್ಯವಿರುವ ಸಂಭನೀಯ ಕ್ಷೇತ್ರಗಳನ್ನು ಗುರುತಿಸಿದ್ದು, ಅಲ್ಲಿ ಇಂದಿನಿಂದ ಚುರುಕು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಅಂತಹ ಕ್ಷೇತ್ರಗಳಿಗೆ ಭೇಟಿ ನೀಡಿ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು, ಹಾಲಿ ಶಾಸಕರು ಅಥವಾ ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹಾಗೂ ಜನ ಪ್ರತಿನಿಧಿಗಳ ಸಭೆ ನಡೆಸುತ್ತಿದ್ದಾರೆ.
ಸಭೆಯಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಅದನ್ನು ಮುಂದಿಟ್ಟುಕೊಂಡು ಯಾವ ರೀತಿ ಹೋರಾಟ ನಡೆಸಬೇಕು, ಮುಂದಿನ ದಿನಗಳಲ್ಲಿ ಅದಕ್ಕೆ ಪರಿಹಾರ ನೀಡುವ ರೀತಿ ಹೇಗೆ ಎಂಬ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಅದನ್ನು ಆಧರಿಸಿ ಮುಂದಿನ ಚುನಾವಣೆ ವರೆಗೂ ಹೋರಾಟವನ್ನು ಸಕ್ರಿಯವಾಗಿಡಲು ಕಾರ್ಯತಂತ್ರ ರೂಪಿಸಲಾಗಿದೆ.
ಈ ರಣತಂತ್ರದ ಪ್ರಥಮ ಹೆಜ್ಜೆಯಾಗಿ ಇಂದು ಮಂಗಳೂರಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಸಭೆ ನಡೆದಿದೆ. ಮೈಸೂರು ಕಂದಾಯ ವಿಭಾಗದ ಜಿಲ್ಲಾಧ್ಯಕ್ಷರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಕಳೆದ ಚುನಾವಣೆಯಲ್ಲಿ ಸೋಲು ಕಂಡವರು ಸಭೆಯಲ್ಲಿ ಭಾಗವಹಿಸಿದ್ದರು. ಸ್ಥಳೀಯ ನಾಯಕರ ಅಭಿಪ್ರಾಯ ಕೇಳಿದ ಬಳಿಕ ಅದನ್ನು ಆಧರಿಸಿ ಮುಂದಿನ ರಾಜಕೀಯ ರಣತಂತ್ರ ರೂಪಿಸುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಇಂದು ಇಡೀ ದಿನ ಸಭೆ ನಡೆಸಲಾಗುವುದು. ಕೆಪಿಸಿಸಿ ಅಧ್ಯಕ್ಷರು ಕಾರ್ಯಕರ್ತರ ದನಿಯಾಗಬೇಕೇ ಹೊರತು ಅಧ್ಯಕ್ಷರ ವಿಚಾರಗಳನ್ನು ಕಾರ್ಯಕರ್ತರ ಮೇಲೆ ಹೇರಬಾರದು. ಈ ನಿಟ್ಟಿನಲ್ಲಿ ನಾನು ಕಾರ್ಯಕರ್ತರ ಅಭಿಪ್ರಾಯ ಕೇಳಿ ಅವರ ನಿಲುವುಗಳಂತೆಯೇ ಪಕ್ಷ ಸಂಘಟನೆ ಮಾಡುತ್ತೇನೆ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞಾವಿದಿ ಸ್ವೀಕರಿಸಿದ ದಿನವೇ ಕಾಂಗ್ರೆಸನ್ನು ಕೇಡರ್ ಪಕ್ಷವಾಗಿ ಪರಿವರ್ತಿಸುವುದಾಗಿ ಘೋಷಣೆ ಮಾಡಿದ್ದೆ. ಅದಕ್ಕೆ ಇಂದಿನಿಂದಲೇ ಚಾಲನೆ ನೀಡಿದ್ದೇನೆ ಎಂದರು.