ಬೆಂಗಳೂರು : 1 ರಿಂದ 9 ನೇ ತರಗತಿಯ ಪಠ್ಯ ಕಡಿತಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, 1 ರಿಂದ 9 ನೇ ತರಗತಿಯ ಪಠ್ಯ ಕಡಿತ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ಮೇ 2 ನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಲಿದೆ ಹಾಗೂ ಜೂನ್ ಮೊದಲನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಶುರುವಾಗಲಿದೆ. ಗುರುವಾರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಇನ್ನೂ, ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪಠ್ಯ ಕಡಿತದ ಬಗ್ಗೆ ಗುರುವಾರ ಮಾಹಿತಿ ನೀಡಲಾಗುವುದು, 1 ರಿಂದ 9 ನೇ ತರಗತಿಯ ಪಠ್ಯ ಕಡಿತ ಮಾಡುವುದಿಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ತರಗತಿಗಳಿಗೆ ಸಂಬಂಧಿಸಿದಂತೆ ಪಠ್ಯ ಕಡಿತ ಎನ್ನುವ ಯಾವುದೇ ಪ್ರಸ್ತಾಪ ಇಲಾಖೆಯ ಮುಂದಿಲ್ಲ ಎಂದು ಅವರು ಹೇಳಿದ್ದಾರೆ.ಇನ್ನೂ. ಶಾಲಾ ಹಂತದಲ್ಲಿ ಮೌಲ್ಯ ಮಾಪನ ನಡೆಸಲಾಗುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಆಧಾರದಲ್ಲಿ ಸರಳ ಮೌಲ್ಯಮಾಪನಾ ಪ್ರಕ್ರಿಯೆ ಜಾರಿಯಲ್ಲಿರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈಗಾಗಲೇ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಜನವರಿ 1 ರಿಂದ ತರಗತಿ ಆರಂಭವಾಗಿದ್ದು, ಹಾಜರಾತಿ ಕೂಡ ಉತ್ತಮವಾಗಿದೆ. ಶಾಲಾ ಬೋಧನೆ ಜೊತೆಗೆ ಆನ್ ಲೈನ್ ಶಿಕ್ಷಣ ಕೂಡ ಮುಂದುವರೆದಿದೆ ಎಂದರು.