ಮಂಗಳೂರು: ಪಕ್ಷ ಸಂಘಟನೆಗೆ ಸಮಯ ಮೀಸಲಿರಿಸಲು ಸಾಧ್ಯವಾಗದವರು ಬೇರೆಯವರಿಗೆ ಅವಕಾಶ ನೀಡಿ ಎಂದು ಸ್ಥಳೀಯ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಾರ್ನಿಂಗ್ ನೀಡಿದ್ದಾರೆ.
ಕಪಿಸಿಸಿ ವತಿಯಿಂದ ರಾಜ್ಯದ ಪ್ರಥಮ, ಮೈಸೂರು ವಿಭಾಗೀಯ ಪ್ರತಿನಿಧಿಗಳ ಸಂಕಲ್ಪ ಸಮಾವೇಶ ವನ್ನು ಬಂಟ್ವಾಳದ ಬಿ.ಸಿ.ರೋಡ್ ನಲ್ಲಿರುವ ಸಾಗರ್ ಆಡಿಟೋರಿಯಂನಲ್ಲಿ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಕಾಂಗ್ರಸ್’ಗೆ 2021 ಹೋರಾಟದ ಮತ್ತು ಪಕ್ಷ ಸಂಘಟನೆಯ ವರ್ಷವೆಂದು ತೀರ್ಮಾನಿಸಿದ್ದೇವೆ. ಸ್ಥಳೀಯ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಕ್ಷವನ್ನು ಕೇಡರ್ ಬೇಸ್ಡ್ ಆಗಿ ಬಲಿಷ್ಠಗೊಳಿಸಲಾಗುವುದು. ರಾಜ್ಯ ಮಟ್ಟದ ಜನರ ಸಮಸ್ಯೆಗಳಿಗಿಂತ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ರೂಪಿಸಲಾಗುವುದು.
ಪಕ್ಷ ಸಂಘಟನೆಗೆ ಸಮಯ ಮೀಸಲಿರಿಸಲು ಸಾಧ್ಯವಾಗದವರು ಬೇರೆಯವರಿಗೆ ಅವಕಾಶ ನೀಡಿ ಎಂದು ತಿಳಿಸಿದ್ದಾರೆ. ಇದೇ ವೇಳೆ ಪಕ್ಷ ಬಿಟ್ಟು ಹೋದವರನ್ನು ಮರಳಿ ಪಕ್ಷಕ್ಕೆ ಕರತರುವ ಘೋಷಣೆಯನ್ನೂ ಮಾಡಿದ್ದಾರೆ.
ಅಧಿಕಾರ ಸುಮ್ಮನೆ ಬರುವುದಿಲ್ಲ. ಬಿಜೆಪಿ, ಜೆಡಿಎಸ್ ವಿಚಾರ ಮತ್ತೆ ಚರ್ಚೆ ಮಾಡೋಣ. ಈಗ ಮೊದಲು ಪಕ್ಷ ಸಂಘಟನೆಗಾಗಿ ಹೋರಾಟ ರೂಪಿಸಬೇಕಾಗಿದೆ. ಚುನಾವಣೆ ಬಂದಾಗ ಮಾತ್ರ ಹೋರಾಡುವುದಲ್ಲ. ಈಗಿನಿಂದಲೇ ಸಜ್ಜಾಗಬೇಕು. ಹಾಗಾಗಿ ಯಾರು ಪಕ್ಷಕ್ಕಾಗಿ ಸಮಯ ನೀಡುತ್ತಾರಕೆ ಎನ್ನುವುದನ್ನು ವಿಮರ್ಶೆ ಮಾಡುವ ಸಮಯ ಬಂದಿದೆ ಎಂದು ಪಕ್ಷದ ಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದರು.
ಮುಂದಿನ ದಿನಗಳಲ್ಲಿ ಜನರು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಹೋರಾಟ ರೂಪಿಸಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅಂತರ ಸಮಸ್ಯೆಗಳನ್ನು ಗುರುತಿಸಿದ್ದೇವೆ. ಇನ್ನು ತಾಲೂಕು ಮಟ್ಟದ ಜನರ ಸಮಸ್ಯಗಳನ್ನು ಪಟ್ಟಿ ಮಾಡಲಿದ್ದು, ಅಲ್ಲೂ ಹೋರಾಟ ನಡೆಯಲಿದೆ. ಸ್ಥಳೀಯ ಹೋರಾಟಗಳಿಗೆ ನಾನೂ, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ರಾಜ್ಯ ಮಟ್ಟದ ನಾಯಕರೂ ಬರಲಿದ್ದಾರೆ. ಹೋರಾಟಗಳನ್ನು ರೂಪಿಸುವಾಗ ಅದು ಭಾವನಾತ್ಮಕವಾಗಿ ಜನರನ್ನು ತಲುವಂತಿರಲಿ ಎಂದು ಸಲಹೆ ನೀಡಿದ್ದಾರೆ.