ಹಲವು ವರ್ಷಗಳಿಂದ ಬಾಲಿವುಡ್ ಸಿನಿಮಾ ಮತ್ತು ಸೆಲೆಬ್ರಿಟಿಗಳಿಗೆ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಸ್ವಪ್ನಿಲ್ ಶಿಂಧೆ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ.
ಇಷ್ಟು ದಿನ ಗಂಡಾಗಿದ್ದ ಅವರು ಲಿಂಗ ಪರಿವರ್ತನೆ ಮಾಡಿಕೊಳ್ಳುವ ಮೂಲಕ ಈಗ ಹೆಣ್ಣಾಗಿದ್ದಾರೆ. ಸ್ವತಃ ಅವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಾರವನ್ನು ಜಗಜ್ಜಾಹೀರುಗೊಳಿಸಿರುವ ಅವರು ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ. ಇಷ್ಟು ದಿನ ಸ್ವಪ್ನಿಲ್ ಶಿಂದೆ ಆಗಿದ್ದವರು ಇನ್ಮುಂದೆ ಸೈಶಾ ಶಿಂಧೆ ಎಂದು ಕರೆಸಿಕೊಳ್ಳಲಿದ್ದಾರೆ. ಈ ಸುದ್ದಿ ಕೇಳಿ ಎಲ್ಲರಿಗೂ ಶಾಕ್ ಆಗಿದೆ.
‘ನಾನು ಬೇರೆಯವರಿಗಿಂತ ಭಿನ್ನವಾಗಿದ್ದೇನೆ ಎಂದು ಶಾಲೆ ಮತ್ತು ಕಾಲೇಜಿನಲ್ಲಿ ಹುಡುಗರು ನನಗೆ ಹಿಂಸೆ ಕೊಡುತ್ತಿದ್ದರು. ಆದರೆ ನನ್ನೊಳಗಿನ ನೋವು ಆ ಹಿಂಸೆಗಿಂತಲೂ ಕೆಟ್ಟದ್ದಾಗಿತ್ತು.
ನಾನು ನಾನೇ ಅಲ್ಲದೇ ಒಂದು ವಾಸ್ತವದಲ್ಲಿ ಉಸಿರು ಕಟ್ಟಿದವರಂತೆ ಜೀವಿಸುತ್ತಿದ್ದೆ. ಸಮಾಜದ ನಿರೀಕ್ಷೆ ಮತ್ತು ನಿಯಮಗಳ ಕಾರಣಕ್ಕೆ ಅದನ್ನು ನಾನು ನಿಭಾಯಿಸಲೇ ಬೇಕಿತ್ತು’ ಎಂದು ಸೈಶಾ ಶಿಂಧೆ ಬರೆದುಕೊಂಡಿದ್ದಾರೆ.
‘ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಆಯಂಡ್ ಟೆಕ್ನಾಲಜಿಯಲ್ಲಿ ಓದುತ್ತಿದ್ದಾಗ ನನಗೆ 20ರ ಹರೆಯ. ನನ್ನ ಸತ್ಯವನ್ನು ಒಪ್ಪಿಕೊಳ್ಳಲು ನಾನು ಧೈರ್ಯ ತೋರಿದೆ. ನಾನು ನಿಜವಾಗಿಯೂ ಅರಳಿದೆ. ನಾನು ಗೇ ಇರಬಹುದೆಂದು ಭಾವಿಸಿ ಪುರುಷ ಬಗ್ಗೆ ಆಕರ್ಷಣೆ ಹೊಂದಿದ್ದೇನೆ ಎನಿಸಿತ್ತು. ಆದರೆ ಈಗ 6 ವರ್ಷಗಳ ಹಿಂದೆ ನಾನು ಸಂಪೂರ್ಣವಾಗಿ ನನ್ನನ್ನು ಒಪ್ಪಿಕೊಂಡೆ. ನಾನು ಗೇ ಅಲ್ಲ. ನಾನು ಲಿಂಗ ಪರಿವರ್ತಿತ ಮಹಿಳೆ’ ಎಂದು ಸೈಶಾ ಶಿಂಧೆ ಬರೆದುಕೊಂಡಿದ್ದಾರೆ.