ಬೆಂಗಳೂರು, ಜ.7- ಸಜ್ಜನರಿಗೆ ರಕ್ಷಣೆ ನೀಡಿ, ದುರ್ಜನರ ಮನಸ್ಥಿತಿಯನ್ನು ಶಿಕ್ಷಿಸಿ ಎಂದು ರಾಜ್ಯಪಾಲ ವಜುಬಾಯಿ ವಾಲಾ ಕರೆ ನೀಡಿದರು. ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 77 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 2018-19 ಸಾಲಿನ ಸ್ವಾತಂತ್ರ್ಯ ಹಾಗೂ ಗಣ ರಾಜ್ಯೋತ್ಸವ ಸಂದರ್ಭದಲ್ಲಿ ಘೋಷಣೆಯಾದ ರಾಷ್ಟ್ರ ಪತಿಗಳ ಪದಕಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಬದುಕಿರುವಷ್ಟು ದಿನ ಶೌರ್ಯ, ಪೌರುಷ ಮತ್ತು ಗರ್ವದಿಂದ ಬದುಕಬೇಕು. ಪೊಲೀಸರದು ಪೌರುಷತ್ವದ ಕೆಲಸ ಎಂದರು. ಪೊಲೀಸರ ಕೆಲಸ ಭಯದಿಂದ ನಡೆಯುವುದಿಲ್ಲ ಬದಲಾಗಿ ಪ್ರೀತಿಯಿಂದ ಆಗಲಿದೆ.
ನೀವು ಜನರಿಗೆ ಎಷ್ಟು ಪ್ರೀತಿ ಕೊಡುತ್ತಿರೋ ಅಷ್ಟೇ ವಿಶ್ವಾಸ ಜನರಿಂದ ನಿಮಗೆ ಸಿಗಲಿದೆ.
ಒಳ್ಳೆಯವರನ್ನು ರಕ್ಷಣೆ ಮಾಡಿ, ದುಷ್ಟರ ಮನಸ್ಥಿತಿಯನ್ನು ನಾಶ ಮಾಡಿ. ಒಳ್ಳೆಯವರಿಗೆ ಶಾಂತಿಯ ವಾತಾವರಣ ನಿರ್ಮಾಣ ಮಾಡಿ. ಗೂಂಡಾಗಿರಿ ಮಾಡುವವರನ್ನು ಹಿಡಿದು ಬುದ್ದಿ ಕಲಿಸಿ. ತಪ್ಪು ಮಾಡಿದವರ ವಿರುದ್ಧ ಸಾಕ್ಷ್ಯ ಹೇಳುವವರಿಗೆ ಧೈರ್ಯ ನೀಡಿ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಸೇರಿ ಯಾರೇ ಪ್ರತಿಭಟನೆ ಮಾಡಿದರೂ, ವಿರೋಧ ಪಕ್ಷಗಳು ಹಂಗಾಮ ನಡೆಸಿದರೂ ಪೊಲೀಸರು ಬೇಕು. ಎಲ್ಲಿಯಾದರೂ ಬೆಂಕಿ ಹಚ್ಚಿದರೂ. ಸಂಕಷ್ಟದಲ್ಲಿರುವವರನ್ನು ರಕ್ಷಣೆ ಮಾಡಲು, ಕಟ್ಟಡ ಕುಸಿದು ಜನ ಅದರ ಕೆಳಗೆ ಸಿಲುಕಿದಾಗ ರಕ್ಷಿಸಲು ಪೊಲೀಸರು ಬೇಕು. ಕೊಲೆಯಾಗಲಿ, ಗುಂಡಾಗಳ ಜಗಳ ಆಗಲಿ ಅಲ್ಲಿ ಪೊಲೀಸರು ಇರಬೇಕು. ಜನರ ರಕ್ಷಣೆಗಾಗಿ ನಿರಂತರವಾಗಿ ಕೆಲಸ ಮಾಡುವುದು ಪೊಲೀಸ್ ಇಲಾಖೆ ಮಾತ್ರ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದವರಿಗೆ ರಾಷ್ಟ್ರಪತಿಗಳ ಪದಕ ಸಿಕ್ಕಿದೆ. ಪದಕ ಪಡೆದಿದ್ದು ದೊಡ್ಡ ಕೆಲಸ ಅಲ್ಲ, ಅದರಿಂದ ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲೂ ಅದನ್ನು ಉಳಿಸಿಕೊಳ್ಳಲು ಇನ್ನಷ್ಟು ನಿಷ್ಠೆಯಿಂದ ಕೆಲಸ ಮಾಡಿ. ಪದಕ ಪಡೆಯದೇ ಇರುವವರು ಉತ್ತಮ ಕೆಲಸ ಮಾಡಿ ಮುಂದಿನ ಬಾರಿ ಪದಕ ಪಡೆಯುವಂತಾಗಲಿ ಎಂದು ಹಾರೈಸಿದರು.
ಪೊಲೀಸರ ಯಾವುದೇ ಬೇಡಿಕೆಯಿದ್ದರೂ ಅದನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯಪಾಲನಾಗಿ ನಾನು ರಾಜಭವನದಲ್ಲಿ ಇರುವವರೆಗೂ ನಿಮ್ಮ ಪರವಾಗಿ ಇರುತ್ತೇನೆ. ಯಾರಾದರೂ ನಿಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು. ಕೊರೊನಾ ಸಂದರ್ಭದಲ್ಲಿ ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ.
ಈ ಹೋರಾಟದಲ್ಲಿ ಹಲವಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಜನರ ಒಳಿತಿಗಾಗಿ ಕೆಲಸ ಮಾಡುವವರಿಗೆ ಒಳ್ಳೆಯದಾಗಬೇಕು. ಕೊರೊನಾ ಸಂದರ್ಭದಲ್ಲಿ ಮನೆಯಿಂದ ಹೊರ ಬರಬೇಡಿ ಎಂದು ವೈದ್ಯರು ಸೇರಿದಂತೆ ಯಾರು ಹೇಳಿದರು ಜನ ಕೇಳಲಿಲ್ಲ. ಪೊಲೀಸರು ಹೇಳಿದಾಗ ಮಾತ್ರ ಪಾಲನೆ ಮಾಡಿದರು ಎಂದರು.
ಇದರ ಹೊರತಾಗಿಯೂ ಪೊಲೀಸರ ಭಾಷೆ ಈಗ ಬದಲಾಗಿದೆ.ಈ ಹಿಂದೆಲ್ಲಾ ಪೊಲೀಸರ ಭಾಷೆಯಲ್ಲಿ ಧಮಕಿ ಇರುತ್ತಿತ್ತು. ಈಗ ಮನವರಿಕೆ ಮಾಡಿಕೊಡುವ ಭಾಷೆಯಲ್ಲಿ ಮಾತನಾಡುತ್ತಾರೆ. ಪೊಲೀಸರು ಈಗ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ದೇಶದಲ್ಲಿ ಶಿಸ್ತು ಬದ್ಧ ಪೊಲೀಸ್ ವ್ಯವಸ್ಥೆ ಇರುತ್ತದೆಯೋ ಆ ದೇಶ ಖಂಡಿತ ಅಭಿವೃದ್ಧಿಯಾಗುತ್ತದೆ ಎಂದು ರಾಜ್ಯಪಾಲರು ಹೇಳಿದರು.
ಗುಜರಾತ್‍ನಲ್ಲಿ ನವರಾತ್ರಿ ಉತ್ಸವ ಸಂದರ್ಭದಲ್ಲಿ ಯುವತಿಯರು ಮಧ್ಯ ರಾತ್ರಿ 2 ಗಂಟೆಯಲ್ಲಿ ಸಂಚರಿಸುತ್ತಾರೆ. ಆದರೆ ಈವರೆಗೂ ಅಲ್ಲಿನ ಮಹಿಳೆಯರಿಗೆ ಯಾವುದೇ ಅಪಾಯವಾಗಿಲ್ಲ. ತಪ್ಪು ಮಾಡುವವರು ಪೊಲೀಸರಿಗೆ ಹೆದರಿಕೊಳ್ಳಬೇಕು, ಯಾವುದೇ ತಪ್ಪು ಮಾಡದವರು ಹೆದರುವ ಅಗತ್ಯ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯಪಾಲರು ಭಾರತ್ ಮಾತಾಕಿ ಜೈ ಘೋಷಣೆ ಹಾಕಿದರು. ಅವರ ಜೊತೆ ಪೊಲೀಸರು ಘೋಷಣೆ ಕೂಗಿದಾಗ ಧ್ವನಿಯ ಪ್ರಮಾಣ ಕಡಿಮೆ ಇತ್ತು. ಧ್ವನಿ ಎಷ್ಟು ಗಡುಸಾಗಿರುತ್ತದೋ ಗುಂಡಿಗೆಯಲ್ಲಿ ಧೈರ್ಯವೂ ಅಷ್ಟೇ ಜೋರಾಗಿರುತ್ತದೆ. ಪೌರುಷತ್ವದ ಕೆಲಸ ಮಾಡುವ ಪೊಲೀಸರ ಸದ್ದು ಜೋರಾಗಿರಬೇಕು, ನಿಮ್ಮ ಘೋಷಣೆ ಕೇಳಿ ಮುಖ್ಯಮಂತ್ರಿ ಮತ್ತು ಗೃಹಸಚಿವರು ನಿಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿ ಮತ್ತೊಮ್ಮೆ ಘೊಷಣೆ ಕೂಗಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಅನೇಕ ಗಣ್ಯರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.