ಮೂರು ಪಕ್ಷಗಳ ಒಲವಿಂದ ಸಭಾಪತಿ ಆಗ್ತಾರಾ ಹೊರಟ್ಟಿ?

0
338

ಹುಬ್ಬಳ್ಳಿ: ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಲು ಮೂರೂ ಪಕ್ಷಗಳ ನಾಯಕರು ಒಲವು ಹೊಂದಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಭಾಪತಿ ಸ್ಥಾನಕ್ಕೆ ಹಿಂದೆ ನನ್ನ ಹೆಸರು ಪ್ರಸ್ತಾಪವಾದಾಗ ಎಲ್ಲ ಪಕ್ಷಗಳ ನಾಯಕರು ಸಹಮತ ವ್ಯಕ್ತಪಡಿಸಿದ್ದರು. ಎಚ್‌.ಡಿ. ದೇವೇಗೌಡ ಅವರೂ ನನ್ನ ಬಗ್ಗೆ ಒಲವು ಹೊಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಜೆಡಿಎಸ್‌ಗೆ ಸಭಾಪತಿ ಸ್ಥಾನ ಕೊಡಬೇಕು ಎಂದು ನಿಯಮವೇನೂ ಇಲ್ಲ. ಆದರೆ, ನಮ್ಮನ್ನು ಬಿಟ್ಟು ಸಭಾಪತಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ’‍ ಎಂದರು.

‘ಪರಿಷತ್‌ನಲ್ಲಿ ಈಚೆಗೆ ನಡೆದ ಗಲಾಟೆ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಆ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಅವಿರೋಧ ಆಯ್ಕೆ ಮಾಡಬೇಕು ಎನ್ನುವ ಚರ್ಚೆಯೂ ನಡೆದಿದೆ’ ಎಂದರು.

ಕೊನೆಯ ಅವಕಾಶವೆಂಬಂತೆ ನಿಮ್ಮನ್ನು ಸಭಾಪತಿ ಮಾಡಲು ಚಿಂತನೆ ನಡೆದಿದೆಯೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ಕೊನೆಯ ಅವಕಾಶವೇನಲ್ಲ, ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು. ಇದಕ್ಕೆ ಮರು ಪ್ರಶ್ನೆ ಹಾಕಿದ ಮಾಧ್ಯಮದವರು ‘ರಾಜಕಾರಣ ಸಾಕಾಗಿದೆ’ ಎಂದು ನೀವೇ ಹೇಳಿದ್ದೀರಲ್ಲ ಎಂದಾಗ; ಹೆರಿಗೆ ನೋವು ತಾಳದೆ ಹೆಣ್ಣುಮಕ್ಕಳು ಇದೊಂದೇ ಮಗು ಸಾಕು ಎಂದು ಹೇಳಿ ಮತ್ತೊಂದು ಹೆರಿಗೆಗೆ ಸಿದ್ಧರಾಗುತ್ತರಲ್ಲ. ರಾಜಕಾರಣವೂ ಹಾಗೆ’ ಎಂದರು.

LEAVE A REPLY

Please enter your comment!
Please enter your name here