ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕಾಲಕಾಲಕ್ಕೆ ಮಣ್ಣು, ಕೀಟ ರೋಗ, ನೀರು ಪರೀಕ್ಷೆ ಸೇರಿದಂತೆ ಇನ್ನಿತರ ತಾಂತ್ರಿಕ ನೆರವನ್ನು ಮನೆ ಬಾಗಿಲಿಗೇ ತಲುಪಿಸುವ ಮಹತ್ವದ ಕೃಷಿ ಸಂಜೀವಿನಿ ಹೆಸರಿನ ಸಂಚಾರಿ ಕೃಷಿ ವಾಹನಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಹನಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕೃತವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರೈತರ ಹೊಲಗಳಿಗೆ ಹೋಗಿ ಮಣ್ಣು, ನೀರು, ರೋಗ ಪರೀಕ್ಷೆ ಮಾಡುವ ವಾಹನ ಇದಾಗಿದೆ. ಸದ್ಯಕ್ಕೆ 40 ವಾಹನಗಳಿಗೆ ಚಾಲನೆ ನೀಡಲಾಗಿದೆ. ಈ ವಾಹನಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡಿಕೊಂಡು ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ರೈತರು ಕೃಷಿ ಸಂಜೀವಿನಿ ಸಹಾಯವಾಣಿ 155313 ಫ್ರೀ ನಂಬರ್ ಗೆ ಕರೆ ಮಾಡಿದರೆ, ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಹೋಗುತ್ತದೆ. ಆಗ ರೈತರು ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಪಡೆಯಬಹುದಾಗಿದೆ. ಈ ಸಹಾಯವಾಣಿ ಆರೋಗ್ಯ ಇಲಾಖೆಯ ಆಂಬುಲೆನ್ಸ್ ನಿರ್ವಹಣಾ ರೀತಿ ಕೆಲಸ ಮಾಡಲಿದೆ.