ಕಲೆ,ಸಾಹಿತ್ಯ,ಚಟುವಟಿಕೆ ; ಸರ್ಕಾರಿ ನೌಕರರಿಗೆ ಅವಕಾಶ

0
441

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಲೇಖನಗಳನ್ನು ಬರೆಯಬಹುದು, ಪುಸ್ತಕಗಳನ್ನು ಪ್ರಕಟಿಸಬಹುದು, ದೂರದರ್ಶನ ಮತ್ತು ಸಿನಿಮಾಗಳಲ್ಲಿ ನಟನೆ ಮಾಡಬಹುದು!

ಆದರೆ, ಈ ಚಟುವಟಿಕೆಗಳು ವಾಣಿಜ್ಯ ಲಾಭದ ಉದ್ದೇಶ ಹೊಂದಿರಬಾರದು. ಕೇವಲ ಕಲಾತ್ಮಕ, ಸಾಹಿತ್ಯಕ, ವೈಜ್ಞಾನಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ವರೂಪದ್ದಾಗಿರಬೇಕು. ಸರ್ಕಾರಿ ಕರ್ತವ್ಯಕ್ಕೆ ಚ್ಯುತಿ ತರುವಂತಿರಬಾರದು.

ರಾಜ್ಯ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿರುವ ‘ಕರ್ನಾಟಕ ನಾಗರಿಕ ಸೇವಾ (ನಡತೆ) 2020’ ತಿದ್ದುಪಡಿ ನಿಯಮಾವಳಿಯ ಪ್ರಮುಖ ಅಂಶವಿದು. ಈ ಹಿಂದೆ ಇದ್ದ ಕಠಿಣ ನಿಯಮಗಳನ್ನು ಕೊಂಚ ಸಡಿಲಿಸಲಾಗಿದೆ. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.

ಸಾಹಿತ್ಯಿಕ, ಕಲಾತ್ಮಕ ಮತ್ತು ವೈಜ್ಞಾನಿಕ ಸ್ವರೂಪದ ಪುಸ್ತಕಗಳನ್ನು ಪ್ರಕಾಶಕರ ಮೂಲಕ ಪ್ರಕಟಿಸಬಹುದು.

ಕಲಾತ್ಮಕ ಮತ್ತು ವೈಜ್ಞಾನಿಕ ಸ್ವರೂಪ ಹೊಂದಿರುವ ಲೇಖನ ಬರೆಯಬಹುದು. ಇದಕ್ಕೆ ಸಂಬಂಧಿಸಿದ ಪ್ರಾಧಿಕಾರದ ಪೂರ್ವ ಅನುಮತಿ ಪಡೆಯುವ ಅಗತ್ಯವಿಲ್ಲ, ಸಾಂದರ್ಭಿಕವಾಗಿ ತೊಡಗಿಸಿಕೊಳ್ಳಬಹುದು ಎಂದು ನಿಯಮ ಸ್ಪಷ್ಟಪಡಿಸಿದೆ.

ಆದರೆ, ಲೇಖನ ಬರೆಯುವುದು, ಆಕಾಶವಾಣಿ, ದೂರದರ್ಶನ ಮತ್ತು ಚಲನಚಿತ್ರಗಳು ಪಾತ್ರವಹಿಸುವುದು ವಾಣಿಜ್ಯ ಲಾಭ ಮಾಡುವ ಸ್ವರೂಪದ್ದಾಗಿದ್ದರೆ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಇತರ ಪ್ರಮುಖ ಅಂಶಗಳು:

* ಸರ್ಕಾರಿ ನೌಕರರು ವರದಕ್ಷಿಣೆ ತೆಗೆದುಕೊಳ್ಳುವಂತಿಲ್ಲ, ಪತಿ ಅಥವಾ ಪತ್ನಿ ಇದ್ದಲ್ಲಿ ಮತ್ತೊಂದು ಮದುವೆ ಆಗುವಂತಿಲ್ಲ.

* ಸರ್ಕಾರಕ್ಕೆ ಸಂಪೂರ್ಣ ನಿಷ್ಠೆ ಹೊಂದಿರಬೇಕು. ರಾಜಕೀಯವಾಗಿ ತಟಸ್ಥವಾಗಿರಬೇಕು. ಮತ್ತು ಸಾರ್ವಜನಿಕರೊಂದಿಗೆ ವಿಧೇಯರಾಗಿ ನಡೆದುಕೊಳ್ಳಬೇಕು.

* ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕೀಯ ಪಕ್ಷಗಳಿಗೆ ಸಂಬಂಧ ಹೊಂದಿದ ಯಾವುದೇ ಸಂಘ ಸಂಸ್ಥೆಗಳ ಸದಸ್ಯರಾಗಿರಬಾರದು. ಅವುಗಳ ಜತೆ ಸಂಬಂಧ ಹೊಂದಿರಬಾರದು.

* ರಾಜಕೀಯ ಚಳವಳಿ ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ಅವುಗಳಿಗೆ ವಂತಿಗೆ ಸಂಗ್ರಹಿಸಬಾರದು ಮತ್ತು ಕೊಡಬಾರದು.

* ಕಾನೂನು ಬದ್ಧ ಸರ್ಕಾರವನ್ನು ಉರುಳಿಸುವ ಪ್ರತ್ಯಕ್ಷ ಅಥವಾ ಪರೋಕ್ಷ ಚಳವಳಿಗಳಲ್ಲಿ ಭಾಗವಹಿಸಬಾರದು. ನೌಕರರ ಕುಟುಂಬದ ಸದಸ್ಯರೂ ಭಾಗವಹಿಸಬಾರದು.

* ರಾಜಕೀಯ ಪಕ್ಷಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಬಾರದು. ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಬಾರದು.

* ಧಾರ್ಮಿಕ, ಜನಾಂಗೀಯ, ಭಾಷಿಕ, ಪ್ರಾದೇಶಿಕ, ಕೋಮು ಭಾವನೆ ಮತ್ತು ದ್ವೇಷಕ್ಕೆ ಕಾರಣವಾಗುವ ಸಂಘ ಸಂಸ್ಥೆಗಳಲ್ಲಿ ಭಾಗವಹಿಸುವಂತಿಲ್ಲ.

*ದೇಶದ ಸಾರ್ವಭೌಮತ್ವ, ಅಖಂಡತೆ, ಭದ್ರತೆ, ವಿದೇಶಿ ರಾಷ್ಟ್ರಗಳ ಸಂಬಂಧ ಹದಗೆಡಿಸುವ ಉದ್ದೇಶದ ಪ್ರತಿಭಟನೆ, ಬಹಿರಂಗ ಸಮಾವೇಶಗಳಲ್ಲಿ ಭಾಗವಹಿಸುವಂತಿಲ್ಲ.

* ಪೂರ್ವಾನುಮತಿ ಇಲ್ಲದೆ ನೌಕರರು ಪ್ರಶಸ್ತಿ ಪತ್ರ ಸ್ವೀಕರಿಸುವಂತಿಲ್ಲ

* ಅಪ್ರಾಪ್ತ ಮಕ್ಕಳನ್ನು ಮನೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ.

* ವಿದೇಶಗಳಲ್ಲಿ ತನ್ನ ಅಥವಾ ಕುಟುಂಬದ ಹೆಸರಿನಲ್ಲಿ ಆಸ್ತಿಯನ್ನು ಹೊಂದುವಂತಿಲ್ಲ.

LEAVE A REPLY

Please enter your comment!
Please enter your name here