ನವದೆಹಲಿ: ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ(ತಿದ್ದುಪಡಿ) ಮಸೂದೆಯನ್ನು ಬೆಂಬಲಿಸಿದ ಬಹುಜನ ಸಮಾಜ ಪಕ್ಷ(ಬಿಎಸ್ ಪಿ), ಸರ್ಕಾರದ ಸುಧಾರಣಾ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದೆ.
ಇಂದು ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಎಸ್ ಪಿ ಸಂಸದ ಮಲೂಕ್ ನಗರ್ ಅವರು, ನಮ್ಮ ಪಕ್ಷ ಬಡವರು, ದಲಿತರು ಮತ್ತು ಕೇಂದ್ರಾಡಳಿತ ಪ್ರದೇಶದ ಇತರ ವಂಚಿತ ಸಮುದಾಯಗಳ ಪರವಾಗಿದೆ ಎಂದರು.
ಕಾಶ್ಮೀರದಲ್ಲಿ 2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ರಾಷ್ಟ್ರೀಯ ಮೀಸಲಾತಿಗೆ ಅನುಗುಣವಾಗಿ ಕಾಶ್ಮೀರದಲ್ಲಿ ಗುಜ್ಜರ್ ಮತ್ತು ಬ್ಯಾಕರ್ವಾಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಮೋದಿ ಸರ್ಕಾರದ ಕ್ರಮವನ್ನು ಉಲ್ಲೇಖಿಸಿದ ನಗರ್, ಗುಜ್ಜರ್ ಮತ್ತು ಬ್ಯಾಕರ್ವಾಲ್ ನಂತಹ ಹಿಂದುಳಿದ ಸಮುದಾಯಗಳು ಕಾಶ್ಮೀರದಲ್ಲಿ ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದರು. ಆದರೆ ಈಗ ಅವರು ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ ಎಂದು ಬಿಎಸ್ ಪಿ ಸಂಸದ ಹೇಳಿದ್ದಾರೆ.
ಕಾಶ್ಮೀರ ಮಸೂದೆ ಬೆಂಬಲಿಸಿದ ನಗರ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಡ ಮನೆಗಳಲ್ಲಿ ಊಟ ಮಾಡುತ್ತಾರೆ. ಆದರೆ ಕೇಂದ್ರದ ಬಡವರ ಪರವಾದ ನೀತಿಗಳನ್ನು ವಿರೋಧಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.