Monday, October 2, 2023
Homeಕ್ರೈಂವೈದ್ಯಕೀಯ ಸೀಟು ಅಕ್ರಮ: ಐಟಿ ದಾಳಿಯಲ್ಲಿ 402 ಕೋಟಿ ರೂ. ಅವ್ಯವಹಾರ ಬಯಲಿಗೆ!

ವೈದ್ಯಕೀಯ ಸೀಟು ಅಕ್ರಮ: ಐಟಿ ದಾಳಿಯಲ್ಲಿ 402 ಕೋಟಿ ರೂ. ಅವ್ಯವಹಾರ ಬಯಲಿಗೆ!

- Advertisement -



Renault

Renault
Renault

- Advertisement -

ಬೆಂಗಳೂರು: ವೈದ್ಯಕೀಯ ಸೀಟು ಶುಲ್ಕ ಅವ್ಯವಹಾರ ಮತ್ತು ತೆರಿಗೆ ವಂಚನೆ ಆರೋಪ ಸಂಬಂಧ ಕರ್ನಾಟಕ, ಕೇರಳದ ಪ್ರತಿಷ್ಠಿತ 9 ವೈದ್ಯಕೀಯ ಕಾಲೇಜುಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ 402.76 ಕೋಟಿ ರೂ. ಅಕ್ರಮ ಎಸಗಿರುವುದು ಪತ್ತೆಯಾಗಿದೆ.

ನೀಟ್‌ ಪರೀಕ್ಷೆಯಲ್ಲಿ ಸೀಟು ಪಡೆದ ವಿದ್ಯಾರ್ಥಿಗಳು ಹಿಂದಿರುಗಿಸಿದ ಸೀಟ್‌ಗಳನ್ನು “ಮ್ಯಾನೇಜ್‌ಮೆಂಟ್‌ ಸೀಟ್‌’ಗಳಾಗಿ ಪರಿವರ್ತಿಸಿ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುವ ಅಕ್ರಮ ಕೂಡ ಬಯಲಾಗಿದೆ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಪ್ರವೇಶಾತಿ ಸಂದರ್ಭದಲ್ಲಿ ಈ ಅಕ್ರಮ ಮತ್ತು ತೆರಿಗೆ ವಂಚಿಸಿವೆ ಎಂದು ಐಟಿ ಇಲಾಖೆ ತಿಳಿಸಿದೆ.

ಮೆಡಿಕಲ್‌ ಕಾಲೇಜು ಮಾಲಕರು, ನಿರ್ದೇಶಕರು, ಪಾಲುದಾರರು, ಈ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಸಿಬಂದಿಯ ನಿವಾಸ ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗಿದ್ದು, 15.09 ಕೋಟಿ ರೂ. ನಗದು, 81 ಕೆ.ಜಿ.

ಚಿನ್ನ (ಸುಮಾರು 30 ಕೋ.ರೂ.), 50 ಕ್ಯಾರೆಟ್‌ ವಜ್ರ, 40 ಕೆ.ಜಿ. ಬೆಳ್ಳಿ ವಸ್ತುಗಳು ಸಿಕ್ಕಿವೆ. ಜತೆಗೆ 2.39 ಕೋಟಿ ರೂ. ಮೌಲ್ಯದ ವಿದೇಶಿ (ಘಾನಾ) ಆಸ್ತಿಗೆ ಸಂಬಂಧಿಸಿದ ದಾಖಲೆ ಮತ್ತು ಬೇನಾಮಿ ಹೆಸರಲ್ಲಿರುವ 35 ಐಷಾರಾಮಿ ಕಾರುಗಳು ಸಿಕ್ಕಿವೆ. ಒಟ್ಟು 9 ಪ್ರತಿಷ್ಠಿತ ಮೆಡಿಕಲ್‌ ಕಾಲೇಜುಗಳಿಗೆ ಸಂಬಂಧಿಸಿದ 56 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವು ಮೆಡಿಕಲ್‌ ಕಾಲೇಜು ಮಾಲಕರು, ಟ್ರಸ್ಟಿಗಳು, ಮಧ್ಯವರ್ತಿಗಳು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ. ನೀಟ್‌ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಕೌನ್ಸೆಲಿಂಗ್‌ ಮೂಲಕ ಎಂಬಿಬಿಎಸ್‌ಗೆ ಪ್ರವೇಶಾತಿ ಪಡೆಯುತ್ತಿದ್ದರು. ಇದು ಕೇವಲ ಸೀಟು ಭರ್ತಿಯಾಗಿದೆ ಎಂದು ತೋರಿಸಿಕೊಳ್ಳಲು ಮಾತ್ರ. ಆದರೆ ಮಧ್ಯವರ್ತಿಗಳು ಮತ್ತು ವಿದ್ಯಾರ್ಥಿಗಳ ಜತೆ ಸೇರಿ ಮೆರಿಟ್‌ ಸೀಟ್‌ಗಳನ್ನು ಮ್ಯಾನೇಜ್‌ಮೆಂಟ್‌ ಸೀಟ್‌ ಆಗಿ ಬದಲಾಯಿಸುತ್ತಿದ್ದರು. ಅನಂತರ ನಿರ್ದಿಷ್ಟ ವಿದ್ಯಾರ್ಥಿ ಪ್ರವೇಶಾತಿ ಹಿಂಪಡೆಯುತ್ತಿದ್ದಂತೆ ಮೆರಿಟ್‌ ಸೀಟ್‌ ಮುಕ್ತಾಯಗೊಂಡಿದ್ದು, ಮ್ಯಾನೇಜ್‌ಮೆಂಟ್‌ ಸೀಟ್‌ಗಳು ಮಾತ್ರ ಇವೆ ಎಂದು ಹೇಳಿಕೊಂಡು, ಮೆರಿಟ್‌ ಅಲ್ಲದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಗಳು ಪ್ರವೇಶ ನೀಡುತ್ತಿದ್ದವು. ಅನಂತರ ನಿಗದಿಗಿಂತ ಹೆಚ್ಚು ಶುಲ್ಕವನ್ನು ಮಧ್ಯವರ್ತಿಗಳ ಮೂಲಕ ಪಡೆಯುತ್ತಿದ್ದವು.

ಮೆಡಿಕಲ್‌ ಕಾಲೇಜುಗಳಲ್ಲಿ ಎಂಬಿಬಿಎಸ್‌, ಬಿಡಿಎಸ್‌ ಮತ್ತು ಸ್ನಾತಕೋತ್ತರ ಸೀಟುಗಳನ್ನು ದೊಡ್ಡ ಮೊತ್ತದ ಹಣ ಪಡೆದು ಮಾರಾಟ ಮಾಡಿರುವ ಬಗ್ಗೆ ಐಟಿ ಇಲಾಖೆಗೆ ಕೆಲವು ದಾಖಲೆಗಳು ಸಿಕ್ಕಿವೆ. ವಿದ್ಯಾರ್ಥಿಗಳು ಮತ್ತು ಮಧ್ಯವರ್ತಿಗಳ ಬಳಿ ನೋಟ್‌ ಬುಕ್ಗಳು, ಅದಕ್ಕೆ ಸಂಬಂಧಿಸಿದ ಅಂಶಗಳನ್ನು ಒಳಗೊಂಡ ಡೈರಿಗಳು, ಎಕ್ಸೆಲ್‌ ಶೀಟ್‌ಗಳು ಪತ್ತೆಯಾಗಿವೆ. ಅನೇಕ ವರ್ಷಗಳಿಂದ ಈ ಕಾಲೇಜುಗಳು ಹಣ ಪಡೆದು ಸೀಟು ಮಾರಾಟ ಮಾಡುತ್ತಿದ್ದವು.

ಒಂದು ಮೆಡಿಕಲ್‌ ಕಾಲೇಜಿನಲ್ಲಿ ಅಭ್ಯರ್ಥಿಗಳನ್ನು ಉತ್ತೀರ್ಣಗೊಳಿಸಲೆಂದೇ ಕೆಲವು ಪ್ಯಾಕೇಜ್‌ ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ 2 ಲಕ್ಷ ರೂ. ಪಡೆದು ಅಭ್ಯರ್ಥಿಗಳನ್ನು ಉತ್ತೀರ್ಣಗೊಳಿಸಲಾಗುತ್ತಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.


ಮೆಡಿಕಲ್‌ ಕಾಲೇಜುಗಳು ಆನ್‌ಲೈನ್‌ ಮೂಲಕ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಶುಲ್ಕವನ್ನು ಆನ್ಲೈನ್‌ ಮೂಲಕವೇ ಪಡೆಯಬೇಕಿತ್ತು. ಆದರೆ ಆರೋಪಿತ ಕಾಲೇಜುಗಳು ನಗದು ರೂಪದಲ್ಲಿ ಶುಲ್ಕ ಪಡೆಯುತ್ತಿದ್ದವು. ಈ ಮೂಲಕ ಆದಾಯ ತೆರಿಗೆ ಇಲಾಖೆ ನಿಯಮ ಉಲ್ಲಂಘಿಸಲಾಗುತ್ತಿತ್ತು. ಈ ಹಣವನ್ನು ಸ್ಥಿರಾಸ್ತಿಗಳ ಮೇಲೆ ಹೂಡಿಕೆ ಮಾಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ಇದೇ ವೇಳೆ ಲಭ್ಯ ಮಾಹಿತಿ ಪ್ರಕಾರ ಮಂಗಳೂರಿನಲ್ಲಿ ಐಟಿ ದಾಳಿ ಗುರುವಾರವೂ ಮುಂದುವರಿದಿದ್ದು, ರಾಜೀವ್‌ ಗಾಂಧಿ ಆರೋಗ್ಯ ವಿ.ವಿ.ಯ ಸಿಂಡಿಕೇಟ್‌ ಸದಸ್ಯರೊಬ್ಬರಿಗೆ ಸೇರಿದ ನಗರದ ಅಪಾರ್ಟ್‌ಮೆಂಟ್‌ ಮತ್ತು ಇತರ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments