ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಉತ್ತಮ ತಾಣವಾಗಿದ್ದು ಪ್ರವಾಸೋದ್ಯಮ ಇಲಾಖೆಯಿಂದ ಒಟ್ಟು 27 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ .ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇಲಾಖಾ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ದಕ್ಷಿಣಕನ್ನಡ ಜಿಲ್ಲೆಯ ಸಸಿಹಿತ್ಲು ಕಡಲ ತೀರದಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗಳನ್ನು ಏರ್ಪಡಿಸುವುದರೊಂದಿಗೆ ದೇಶ -ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲಾಗುವುದು ಎಂದರು. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಮುಂದೆ ಇರುವ ಪ್ರಸ್ತಾವನೆಗಳ ಮಾಹಿತಿ ಪಡೆಯಲಾಗಿದ್ದು, ಅವುಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇವುಗಳಲ್ಲಿ ಕೆಲವು ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ, ಅನುಮೋದನೆ ನೀಡಬೇಕಾದೆ . ಇನ್ನು ಉಳಿದಂತೆ ಸುಮಾರು 8-10 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ವಿವಿಧ ಹಂತದಲ್ಲಿ ಇರುವುದರಿಂದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ನಲ್ಲಿ ಪ್ರವಾಸಿಗರು ಕ್ರೂಸ್ನಲ್ಲಿ ಭೇಟಿ ನೀಡುತ್ತಿದ್ದು, ಅವರುಗಳಿಗೆ ಕೇವಲ ಒಂದು ದಿನ ಮಾತ್ರ ನಲ್ಲಿ ತಂಗುವ ಸೌಲಭ್ಯ ದೊರಕುತ್ತಿದೆ. ಈ ಸೌಲಭ್ಯವನ್ನು 2-3 ದಿನಗಳಿಗೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಿ, ಪ್ರವಾಸೋದ್ಯಮ ಇಲಾಖೆಯ ಪಾಲುಗಾರಿಕೆಯೊಂದಿಗೆ ಸುತ್ತ-ಮುತ್ತಲಿನ ಜಿಲ್ಲೆಗಳನ್ನು ಅಂತರಾಷ್ಟ್ರೀಯ ಪ್ರವಾಸಿಗರಿಗೆ ಪರಿಚಯಿಸುವ ಒಂದು ಯೋಜನೆಯನ್ನು ರೂಪಿಸುವ ಬಗ್ಗೆ ಚರ್ಚಿಸಲಾಗಿದೆ. ಸರ್ಫಿಂಗ್ ಸ್ಕೂಲ್ & ಕ್ಲಬ್ ಹೌಸ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರದಿಂದ ರೂ.10. ಕೋಟಿರೂ. ಅನುದಾನ ಮಂಜೂರಾಗಿದೆ ಈ ನಿಟ್ಟಿನಲ್ಲಿ ಶೀಘ್ರವಾಗಿ ಸಿ.ಆರ್.ಝಡ್ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಅಂತಾರಾಷ್ಟ್ರೀಯ ಬ್ಲೂಫ್ಲಾಗ್ ಮಾನ್ಯತೆ ಪಡೆದಿರುವ ಪಡುಬಿದ್ರೆ ಹಾಗೂ ಕಾಸರಕೋಡು ಕಡಲತೀರಗಳ ಮಾದರಿಯಲ್ಲಿ ತಲಪಾಡಿ, ಪಣಂಬೂರು,ಚಿತ್ರಾಪುರ, ಸೂರತ್ಕಲ್,ಸೋಮೇಶ್ವರ, ಉಲ್ಲಾಳ,ತಣ್ಣಿರುಭಾವಿ ಬೀಚ್ಗಳಿಗೆ ಸಂಪರ್ಕ ರಸ್ತೆಗಳು, ಶೌಚಾಲಯಗಳು, ಹೈಮಾಸ್ಕ್ ದೀಪಗಳು ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಜೈನರ ಕಾಶಿಯೆಂದೇ ಪ್ರಸಿದ್ಧವಾಗಿರುವ ಮೂಡುಬಿದ್ರೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ ಧಾರ್ಮಿಕ ಪ್ರವಾಸಿ ವೃತ್ತವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದೂ ಸಚಿವರು ಹೇಳಿದರು.