ಬೆಂಗಳೂರು(ಫೆ.23): ಜನಸಾಮಾನ್ಯರಿಂದ ಹಿಡಿದು ವಿವಿಐಪಿಗಳವರೆಗೆ ಯಾರೂ ಮಾಸ್ಕ್ ಧರಿಸದಿರುವುದು ನಿಜಕ್ಕೂ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಮದುವೆ ಸಮಾರಂಭ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ 21 ಮೆಡಿಕಲ್ ಕಾಲೇಜು ಉನ್ನತೀಕರಣ: ಸಚಿವ ಸುಧಾಕರ್
ಸೋಮವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಆರೋಗ್ಯಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನಿಯಮಾವಳಿಗಳನ್ನು ಸಡಿಲಿಕೆ ಮಾಡಿದ ಬಳಿಕ ಸಭೆ, ಸಮಾರಂಭ, ಸಮಾವೇಶದಲ್ಲಿ ಹೆಚ್ಚಿನ ಜನ ಸೇರುತ್ತಿದ್ದಾರೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲನೆ ಮಾಡುತ್ತಿಲ್ಲ. ಜನಸಾಮಾನ್ಯರಿಂದ ಗಣ್ಯವ್ಯಕ್ತಿಗಳವರೆಗೂ ಮಾಸ್ಕ್ ಧರಿಸುತ್ತಿಲ್ಲ. ಇದು ನಿಜಕ್ಕೂ ಅಪಾಯಕಾರಿ. ಹೀಗಾಗಿ ಮದುವೆ ಸಮಾರಂಭ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಮಾರ್ಷಲ್‌ಗಳನ್ನು ನಿಯೋಜನೆ ಮಾಡಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ದಂಡ ಸೇರಿ ಇತರೆ ಕ್ರಮಗಳನ್ನು ಅವರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ಸಭೆ, ಸಮಾರಂಭ, ಹೋರಾಟಗಳು ನಡೆಯುತ್ತಿವೆ. ಮಾರ್ಗಸೂಚಿ ಪಾಲಿಸದೆ ಕೋವಿಡ್ ಸೋಂಕು ಹೆಚ್ಚಾದರೆ ಮತ್ತಷ್ಟುಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಹಾರಾಷ್ಟ್ರದ ಕೆಲ ಜಿಲ್ಲೆಯಲ್ಲಿ ಲಾಕ್‌ಡೌನ್ ಆಗಿದ್ದು, ಆ ಪರಿಸ್ಥಿತಿ ರಾಜ್ಯಕ್ಕೆ ಬರಬೇಕೆ ಎಂಬುದರ ಬಗ್ಗೆ ಆಲೋಚಿಸಬೇಕು. ರಾಜ್ಯದಲ್ಲಿ ಲಾಕ್‌ಡೌನ್ ಅಗತ್ಯವಿಲ್ಲ. ಅದರ ಪ್ರಸ್ತಾವನೆಯೂ ಇಲ್ಲ. ಅಲ್ಲದೆ ಹೋಟೆಲ್, ಡಾಬಾ, ರೆಸ್ಟೋರೆಂಟ್ ಮತ್ತು ಅಡುಗೆ ಮಾಡುವವರು ಸೇರಿ ಎಲ್ಲಾ ಆಹಾರ ತಯಾರಿಕೆ ಮಾಡುವವರ ಮೇಲೆ ನಿಗಾ ಇಡುವಂತೆ ತಿಳಿಸಲಾಗಿದೆ. ಅವರಿಗೂ ಪರೀಕ್ಷೆ ಮಾಡಿಸುವಂತೆ ಆರೋಗ್ಯ ಇಲಾಖೆ ನಿರ್ದೇಶಿಸಿದೆ ಎಂದರು.
ಹೆಚ್ಚುತ್ತಿರುವ ಕೊರೋನಾ: ಬೆಂಗ್ಳೂರಲ್ಲೂ ತೀವ್ರ ಕಟ್ಟೆಚ್ಚರ
ಆರೋಗ್ಯ ಇಲಾಖೆಯ 4,24,573 ಮಂದಿಗೆ ಮೊದಲ ಕೋವಿಡ್ ಡೋಸ್ ನೀಡಲಾಗಿದೆ. 1,20,176 ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಸರ್ಕಾರದ ಇತರೆ ಇಲಾಖೆಯಲ್ಲಿ 2.90 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. 8 ಲಕ್ಷ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು, ಫೆ.28ರೊಳಗೆ ಗುರಿ ತಲುಪುವಂತೆ ಸೂಚನೆಯನ್ನು ನೀಡಲಾಗಿದೆ. ಮಂಗಳವಾರ, ಬುಧವಾರ ಸಹ ಲಸಿಕೆ ಅಭಿಯಾನ ಮಾಡಲಾಗುತ್ತಿದ್ದು, ಎಲ್ಲಾ ಅಧಿಕಾರಿಗಳಿಗೆ ಲಸಿಕೆ ಪಡೆಯಲು ತಾಕೀತು ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಸಿಕೆ ಅಭಿಯಾನ ಕುರಿತು ಮಾಹಿತಿ ಪಡೆಯುತ್ತಿದ್ದು, ವಾರದಲ್ಲಿ ಈ ಕುರಿತು ಎಲ್ಲ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಸಿಬ್ಬಂದಿಯ ಲಸಿಕೆ ಅಭಿಯಾನದಲ್ಲಿ ಬೆಂಗಳೂರು ನಗರ ಹಿಂದುಳಿದಿದೆ. ಲಸಿಕೆ ಕೊಡುವುದರಲ್ಲಿ ಹಿಂದುಳಿದಿರುವುದರಿಂದ ಬಿಬಿಎಂಪಿ ಆಯುಕ್ತರಿಗೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರು ನಗರ, ಬಾಗಲಕೋಟೆ, ದಾವಣಗೆರೆ, ಧಾರವಾಡ ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ಪ್ರಮಾಣ ಶೇ.50ಕ್ಕಿಂತ ಕಡಿಮೆ ಇದೆ. ಚಿಕ್ಕಬಳ್ಳಾಪುರ ಶೇ.79, ತುಮಕೂರು ಶೇ.78, ಉತ್ತರ ಕನ್ನಡ ಶೇ.73, ಗದಗ ಶೇ.71, ಚಿಕ್ಕಮಗಳೂರು ಶೇ.70, ಚಾಮರಾಜನಗರ ಶೇ.70ರಷ್ಟುಸಾಧನೆಯಾಗಿದೆ. ಗದಗ ಜಿಲ್ಲೆಯಲ್ಲಿ ಶೇ.84ರಷ್ಟುಸಾಧನೆಯಾಗಿದೆ. ಬೆಂಗಳೂರು ನಗರ (ಶೇ.1.2), ಕಲಬುರಗಿ (ಶೇ.1.37), ದಕ್ಷಿಣ ಕನ್ನಡ (ಶೇ.1.4) ಜಿಲ್ಲೆಯಲ್ಲಿ ಪಾಸಿಟಿವ್ ಹೆಚ್ಚಳವಾಗಿದೆ. ಈ ಜಿಲ್ಲೆಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚಳ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪುಣೆಯಲ್ಲಿ ನೈಟ್ ಕರ್ಫ್ಯೂ, ಅಮರಾವತಿ ಲಾಕ್‌ಡೌನ್; ಕೊರೋನಾ 2ನೇ ಅಲೆಗೆ ತತ್ತರಿಸಿದ ಮಹಾರಾಷ್ಟ್ರ!
ಮಹಾರಾಷ್ಟ್ರ, ಕೇರಳ ಜನರ ಪ್ರಯಾಣಕ್ಕೆ ನಿರ್ಬಂಧವಿಲ್ಲ
ಕೋವಿಡ್ ಹೆಚ್ಚಾಗಿರುವ ಕೇರಳ, ಮಹಾರಾಷ್ಟ್ರದಿಂದ ಜನರ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ, ರಾಜ್ಯದೊಳಗೆ ಬರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಕೇರಳ, ಮಹಾರಾಷ್ಟ್ರದ ಆರೋಗ್ಯ ಸಚಿವರ ಜತೆ ಸಭೆ ನಡೆಸಿ ಅಲ್ಲಿಂದ ಬರುವ ಜನರಿಗೆ ಮಾರ್ಗಸೂಚಿ ಪ್ರಕಟಿಸುವಂತೆ ಮನವಿ ಮಾಡಲಾಗುವುದು. ರಾಜ್ಯದಿಂದ ಆ ರಾಜ್ಯಕ್ಕೆ ಬೇಕಾದ ಅಗತ್ಯ ಸಹಕಾರ ನೀಡಲಾಗುವುದು. 5 ಜನರಿಗೆ ಒಂದೇ ಕಡೆ ಪಾಸಿಟಿವ್ ಬಂದರೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಪರಿಗಣಿಸಲು ಸೂಚಿಸಲಾಗಿದೆ. ಕೊರೋನಾ 2ನೇ ಅಲೆ ಬಾರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಾಚ್‌ರ್‍ನಿಂದ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಸಂಬಂಧ ಕೇಂದ್ರ ಸರ್ಕಾರವು ಶೀಘ್ರವೇ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.
ಚಿತ್ರಮಂದಿರದಲ್ಲಿ 4 ವಾರಗಳ ಕಾಲ ಶೇ.100ರಷ್ಟುಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಅದನ್ನು ಗಮನಿಸಿ ಮತ್ತು ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಚಿತ್ರರಂಗದ ಪ್ರತಿನಿಧಿಗಳ ಸಭೆಯಲ್ಲಿ ಈ ವಿಚಾರ ತಿಳಿಸಲಾಗಿದೆ ಎಂದರು.
ಕೇರಳ, ಮಹಾರಾಷ್ಟ್ರದ ಕ್ಯಾತೆ: ಪಿಎಂಗೆ ದೂರು
ಕೊರೋನಾ ಹರಡದಂತೆ ತಡೆಯಲು ರಾಜ್ಯದ ಗಡಿಯಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಕೇರಳ ಹಾಗೂ ಮಹಾರಾಷ್ಟ್ರ ಸರ್ಕಾರಗಳು ತೀವ್ರ ತಕರಾರು ತೆಗೆದಿವೆ. ಗಡಿಯಲ್ಲಿ ಕೆಲವು ರಸ್ತೆಗಳನ್ನು ಬಂದ್ ಮಾಡಿರುವುದರ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡುವುದಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ. ಇನ್ನು, ಮಹಾರಾಷ್ಟ್ರದ ಗೃಹ ಸಚಿವ ಸತೇಜ್ ಪಾಟೀಲ್, ‘ಮಹಾರಾಷ್ಟ್ರದಿಂದ ಹೋದವರಿಗೆ ಕರ್ನಾಟಕ ಸರ್ಕಾರವೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಾವೂ ಕರ್ನಾಟಕದಿಂದ ಬರುವವರಿಗೆ ನಿಷೇಧ ಹೇರುತ್ತೇವೆ’ ಎಂದಿದ್ದಾರೆ.