ಮಂಗಳೂರು, ಫೆ.10: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಜ್ ಮೇಲೆ ತಲವಾರು ದಾಳಿ ನಡೆದಿದೆ. ಕಾಟಿಪಳ್ಳ ಸೆಕೆಂಡ್ ಕ್ರಾಸ್ ನಲ್ಲಿ ಘಟನೆ ನಡೆದಿದ್ದು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ತಲವಾರು ದಾಳಿ ನಡೆಸಿದೆ.
ಕಾಟಿಪಳ್ಳ ನಿವಾಸಿಯಾಗಿರುವ ಪಿಂಕಿ ನವಾಜ್ ರೌಡಿ ಶೀಟರ್ ಆಗಿದ್ದು ರಸ್ತೆ ಬದಿ ನಿಂತಿದ್ದಾಗಲೇ ವಿರೋಧಿ ಗ್ಯಾಂಗ್ ತಲವಾರು ಬೀಸಿದೆ ಎನ್ನಲಾಗಿದೆ. ಆದರೆ, ನವಾಜ್ ಓಡಿ ತಪ್ಪಿಸಿಕೊಂಡಿದ್ದು ಬೆನ್ನು ಮತ್ತು ಕೈಗೆ ತೀವ್ರ ಗಾಯಗೊಂಡಿದ್ದಾನೆ. ಬಳಿಕ ಆತನನ್ನು ನಗರದ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಹಾಡುಹಗಲೇ ಕಾಟಿಪಳ್ಳ ಪೇಟೆಯ ಬಳಿ ದೀಪಕ್ ರಾವ್ ಕೊಲೆ ನಡೆದಿತ್ತು. ಅದರಲ್ಲಿ ಪಿಂಕಿ ನವಾಜ್ ಸೇರಿ ನಾಲ್ವರು ಆರೋಪಿಗಳಿದ್ದರು. ಕೊಲೆಯ ಬಳಿಕ ಅಲ್ಲಿಂದ ಪರಾರಿಯಾಗಿದ್ದು ಪೊಲೀಸರು ವಿಷಯ ತಿಳಿದು ಫಾಲೋ ಮಾಡಿದ್ದರು. ಕಿನ್ನಿಗೋಳಿಯಿಂದ ಮೂಡುಬಿದ್ರೆ ಕಡೆಗೆ ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಅಡ್ಡಗಟ್ಟಿದ್ದರು. ಆರೋಪಿಗಳು ತಲವಾರು ಬೀಸಿದ್ದರಿಂದ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಈ ಪೈಕಿ ಪಿಂಕಿ ನವಾಜ್ ಮೇಲೂ ಕಾಲಿಗೆ ಗುಂಡು ಬಿದ್ದಿತ್ತು.
ಇಂದು ಸಂಜೆ ನವಾಜ್ ನನ್ನು ಗುರಿಯಾಗಿರಿಸಿ ದಾಳಿ ನಡೆದಿದ್ದು ದೀಪಕ್ ಕೊಲೆಯ ಪ್ರತೀಕಾರಕ್ಕಾಗಿ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.