ಉಡುಪಿ, ಫೆ. 25: ಜಿಲ್ಲೆಯ ಹಿರಿಯ ಸಹಕಾರಿ ಧುರೀಣ, ಉಪ್ಪೂರು ಸೊಸೈಟಿಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಎನ್. ಶೆಟ್ಟಿ ಅವರ ಮನೆಗೆ ನುಗ್ಗಿದ ಕಿಡಿಗೇಡಿಗಳ ತಂಡ ದಾಂದಲೆ ನಡೆಸಿರುವ ಘಟನೆ ನಡೆದಿದೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದ್ದು ಫೆ.23ರಂದು ರಮೇಶ ಶೆಟ್ಟಿ ಕುಕ್ಕೆಹಳ್ಳಿಯ ಮನೆಯಲ್ಲಿರುವಾಗ ವಿರೋಧಿಗಳ ತಂಡ ರಾಜಕೀಯ ದ್ವೇಷದಿಂದ ಮನೆಗೆ ಮತ್ತು ವಾಹನಕ್ಕೆ ಹಾನಿ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಇದರ ಜೊತೆಗೆ ಗೇಟಿನ ಲೈಟ್ ಗಳನ್ನು ಒಡೆದು ಹಾಕಿದ್ದಾರೆ, ಜೊತೆಗೆ ಏರುಧ್ವನಿಯಲ್ಲಿ ರಮೇಶ್ ಎನ್ ಶೆಟ್ಟಿ ಇವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ರಾತ್ರಿ 10:30ರ ಸುಮಾರಿಗೆ ಕುಟುಂಬದವರ ಜೊತೆ ಮನೆಯಲ್ಲಿರುವಾಗ ಜಗದೀಶ ಶೆಟ್ಟಿ ಯಾನೆ ಸುನಿಲ್ ಶೆಟ್ಟಿ, ಅನಿಲ್ ಶೆಟ್ಟಿ, ಅಜಿತ್ ಶೆಟ್ಟಿ ಹಾಗೂ ಇತರರು ಈ ಕೃತ್ಯ ಎಸಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ರಾತ್ರಿ ಬಾಗಿಲು ಬಡಿದ ಶಬ್ದ ಕೇಳಿ ಕಿಟಕಿಯಲ್ಲಿ ನೋಡಿದಾಗ ಇವರೆಲ್ಲ ಮನೆಯ ಅಂಗಳದಲ್ಲಿದ್ದು, ಅಲ್ಲಿಂದಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದು, ಮನೆಯ ಎದುರು ನಿಲ್ಲಿಸಿದ್ದ ಕಾರನ್ನು ಹಾನಿಗೊಳಿಸಿದ್ದಾರೆ. ಬಳಿಕ ಅವರು ಕೆಂಪು ಬಣ್ಣದ ಜೀಪಿನಲ್ಲಿ ಹೋಗಿರುವುದಾಗಿ ತಿಳಿಸಿದ್ದಾರೆ.