ಮಂಗಳೂರು:ಆತ ಕಾಟಿಪಳ್ಳದ ಬಡ ಮುಸ್ಲಿಂ ಕಾರ್ಮಿಕನ ಮಗ. ಪ್ರಾಯ ಇಪ್ಪತ್ತು, MRPL ನಲ್ಲಿ ಕೋಕ್ ಸಾಗಿಸುವ ಟ್ರಕ್ ಗಳಿಗೆ ಟರ್ಪಾಲು ಕಟ್ಟುವ ಅಪಾಯಕಾರಿ ಕೂಲಿ ಕೆಲಸಕ್ಕೆ ಟ್ರಾನ್ಸ್ ಪೋರ್ಟ್ ಏಜೆನ್ಸಿಗಳ ಮೂಲಕ ಹೋಗುತ್ತಾನೆ.
“ತಾಂಟು” ಭಾಷಣದ ಸವಾಲು, ಪ್ರತಿ ಸವಾಲಿನ ಉದ್ರೇಕದ ಮಾತುಗಳಿಂದ ಪ್ರಚೋದನೆಗೊಂಡಿದ್ದ “ಹಿಂದು” ಯುವಕರಿಂದ ಇರಿತಕ್ಕೊಳಗಾಗಿ ಈಗ ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಮಲಗಿದ್ದಾನೆ.ವೈದ್ಯಕೀಯ ವರದಿಯ ಪ್ರಕಾರ ಗಾಯ ತುಂಬಾ ಆಳವಾಗಿದೆ.
ಸಣ್ಣ ತೂತು ಉಂಟಾಗಿದ್ದು. ಕನಿಷ್ಟ ಮೂರು ತಿಂಗಳು ದ್ರವಾಹಾರ ಮಾತ್ರ ಸೇವಿಸಬೇಕು. ಕನಿಷ್ಟ ಆರು ತಿಂಗಳು ವಿಶ್ರಾಂತಿ ಪಡೆಯಬೇಕು. ಸರ್ಜರಿ ಸಹಿತ ಚಿಕಿತ್ಸೆಗೆ ಮೂರ್ನಾಲ್ಕು ಲಕ್ಷ ಖರ್ಚು ಬರುತ್ತದೆ. ಈತನ ಕುಟುಂಬ ಅಂದಂದಿನ ದುಡಿಮೆಯಿಂದಲೆ ಜೀವನ ಸಾಗಿಸುವುದರಿಂದ ಈ ದಿಢೀರ್ ಆಘಾತದಿಂದ ಕಂಹೆಟ್ಟು ಹೋಗಿದೆ.
ಕುಟುಂಬಕ್ಕೆ ಮಸೀದಿಗಳಲ್ಲಿ ಹಣ ಸಂಗ್ರಹಿಸಿ ಕೊಡುವ ದುರ್ಗತಿ ಎದುರಾಗಿದೆ.ಅತ್ತ ಮಸ್ಲಿಮನೊಬ್ಬನಿಗೆ ಇರಿಯಬೇಕು, ತಾಂಟು ಸವಾಲಿಗೆ ಉತ್ತರ ನೀಡಬೇಕು, ನಾಯಕರ ವಿಕೆಟ್ ತೆಗೆಯು ಮಾತಿಗೆ ಬೆಲೆ ಬರುವಂತೆ ಮಾಡಬೇಕು ಎಂಬ ಧರ್ಮಾಂಧತೆಗೆ ಬಿದ್ದ ಬಡ ಕುಟುಂಬಗಳ ಮೂರು ಹಿಂದು ಹುಡುಗರು ಜೈಲು ಸೇರಿದ್ದಾರೆ.
ಹೆತ್ತವರು ಮಕ್ಕಳ ಕೋರ್ಟು, ವಕೀಲರ ಖರ್ಚಿಗೆ ಪರದಾಡುತ್ತಿದ್ದಾರೆ.ಇರಿತಕ್ಕೊಳಗಾದ ಮುಸ್ಲಿಂ ಯುವಕನಿಗೂ, ಇರಿದ ಹಿಂದು ಯುವಕರಿಗೂ ಪರಸ್ಪರ ಯಾವ ದ್ವೇಷವೂ ಇರಲಿಲ್ಲ. ಇವರೆಲ್ಲರದ್ದೂ ಬದುಕು ಸಾಗಿಸಲು ಹೆಣಗಾಡುವ ಒಂದೇ ರೀತಿಯ ಸಮಸ್ಯೆಗಳುಲ್ಲ ಕುಟುಂಬಗಳು. SDPI ನಾಯಕನ “ನೀ ತಾಂಟ್ರೆ ಬಾ ತಾಂಟ್” ಭಾಷಣ, ಅದಕ್ಕೆ ಪ್ರತಿಯಾಗಿ ವಿಶ್ವ ಹಿಂದು ಪರಿಷತ್ ನ ಪಂಪ್ ವೆಲ್, ವಜ್ರದೇಹಿ ಸ್ವಾಮಿಯ ವಿಕೆಟ್ ತೆಗೆಯುವ (ಕೊಲೆ ಮಾಡುವ) ಉದ್ರೇಕಕಾರಿ ಭಾಷಣಗಳಿಂದ ಪ್ರಚೋದನೆಗೊಂಡು ಯಾರಾದರು ಒಬ್ಬ ಬ್ಯಾರಿಗೆ ಇರಿಯಬೇಕು ಎಂದು ದಾರಿಯಲ್ಲಿ ಸಿಕ್ಕ ಬಡಪಾಯಿ ಯುವಕನಿಗೆ ಇರಿದಿದ್ದಾರೆ.
ಗಂಭೀರ ಗಾಯಗೊಂಡರೂ ಕೂದಲೆಲೆ ಅಂತರದಲ್ಲಿ ಮಸ್ಲಿಂ ಯುವಕ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ನರಳುತ್ತಾ ಮಲಗಿದ್ದಾನೆ. ಇತ್ತ ಮೂರು ಹಿಂದು ಹುಡುಗರು ಪೊಲೀಸರಿಂದ ಹಿಗ್ಗಾ ಮುಗ್ಗಾ ಹೊಡೆಸಿಕೊಂಡು ಜೈಲು ಪಾಲಾಗಿದ್ದಾರೆ. ಇನ್ನು ಇವರಿಗೆ ಸಮಾಜದಲ್ಲಿ ಕ್ರಿಮಿನಲ್ ಪಟ್ಟ ಶಾಶ್ವತ.ತಾಂಟುವ ಭಾಷಣ ಮಾಡಿದ Sdpi ನಾಯಕರು, ಅದಕ್ಕೆ ಉತ್ತರವಾಗಿ ನಾವು ಮೂತ್ರ ಮಾಡಿದರೆ ನೀವು ಕೊಚ್ಚಿ ಹೋಗುತ್ತೀರಿ ಎಂದು ವಿಕೆಟ್ ತೆಗೆಯುವ ಭಾಷಣ ಮಾಡಿದ ಸಂಘಪರಿವಾರದ ನಾಯಕರು ಸೇಫಾಗಿ ಮನೆ ಸೇರಿದ್ದಾರೆ.
ಅವರ ಬಂಗಲೆ, ಕಾರು, ಬಾರು ಉದ್ಯಮಗಳಿಗೆ ಯಾವ ಧಕ್ಕೆಯೂ ಆಗುವುದಿಲ್ಲ. ನಾಯಕರಾಗಿ ಮತ್ತಷ್ಟು ಎತ್ತರಕ್ಕೆ ಏರಿ ಚುನಾವಣೆಗೂ ನಿಂತು ಗೆಲ್ಲುತ್ತಾರೆ. ಸಾಮಾನ್ಯ ಹಿಂದು, ಮುಸ್ಲಿಂ ಯುವಕರು ಮಾತ್ರ ತಾಂಟುತ್ತ ಬದುಕು ನಾಶ ಮಾಡಿಕೊಳ್ಳುತ್ತಲೇ ಇರುತ್ತಾರೆ.