ಬೆಳಗಾವಿ: ಮನೆ ಮೇಲ್ಮಹಡಿಯ ಮುಂಭಾಗದಲ್ಲಿ ಹೂವು ತೆಗೆಯಲು ಹೋಗಿ ಆಯತಪ್ಪಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದ ಹಿಂದೂ ಸಮಾಜದ ಬಾಲಕಿಯ ಅಂತ್ಯಕ್ರಿಯೆಯನ್ನು ಮುಸ್ಲಿಂ ಮುಖಂಡರು ಸೇರಿ ನೆರವೇರಿಸಿ ಮಾನವೀಯತೆ ಮೆರೆದ ಅಪರೂಪದ ಪ್ರಸಂಗ ನಗರದಲ್ಲಿ ನಡೆದಿದೆ.
ಇಲ್ಲಿನ ವೀರಭದ್ರ ನಗರದ ನಿವಾಸಿ ವಿದ್ಯಾಶ್ರೀ ಹೆಗಡೆ (10) ಮೃತ ಬಾಲಕಿ. ಮೂಲತಃ ಉಡುಪಿ ಜಿಲ್ಲೆಯವರಾದ ಬಾಲಕಿ ತಂದೆಯ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಬೆಳಗಾವಿಯಲ್ಲಿ ನೆಲೆಸಿದ್ದಾರೆ. ಬಾಲಕಿ ವಿದ್ಯಾಶ್ರೀ ತನ್ನ ತಾಯಿಯ ಜೊತೆಗೆ ವಾಸವಾಗಿದ್ದರು. ಗುರುವಾರ ಬೆಳಿಗ್ಗೆ ಬಾಲಕಿ ವಿದ್ಯಾಶ್ರೀ ಮನೆಯ ಮುಂಭಾಗದಲ್ಲಿ ಇದ್ದ ಹೂವನ್ನು ಕೀಳಲು ಹೋಗಿ ಮಹಡಿಯಿಂದ ಬಿದ್ದಿದ್ದಳು.
ಈ ವೇಳೆ ಸ್ಥಳೀಯ ಮುಸ್ಲಿಂ ಮುಖಂಡರು ಗಾಯಗೊಂಡ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರ ಚಿಕಿತ್ಸೆ ಫಲಿಸದೇ ಬಾಲಕಿ ಸಾವನ್ನಪ್ಪಿದ್ದಳು. ಅಸ್ಪತ್ರೆಯ ವೆಚ್ಚವನ್ನು ಭರಿಸಲು ತಾಯಿಗೆ ಸಾಧ್ಯವಾಗದ ಕಾರಣ ಮುಸ್ಲಿಂ ಸಮಾಜದ ಮುಖಂಡರೇ ಈ ವೆಚ್ಚ ಭರಿಸಿದರು. ಬಾಲಕಿಯ ಅಂತ್ಯಕ್ರಿಯೆಗೆ ಸಂಬಂಧಿಕರು ಮತ್ತು ಸ್ಥಳೀಯರು ಮುಂದೆ ಬಾರದೇ ಇದ್ದಾಗ ಮುಸ್ಲಿಂ ಮುಖಂಡರು ಮುಂದೆ ಬಂದು ಸದಾಶಿವ ನಗರದಲ್ಲಿರುವ ಲಿಂಗಾಯತ
ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಮುಸ್ಲಿಂ ಸಮಾಜದ ಮುಖಂಡರ ಈ ಮಾನವೀಯತೆ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮಾನವೀಯ ಕಾರ್ಯವೊಂದೇ ಎಲ್ಲ ಕಾಲಕ್ಕೂ ಸೀಮಿತ ಎಂಬ ಭಾವೈಕ್ಯ ಸಂದೇಶವನ್ನು ರವಾನಿಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪಾಲಿಕೆ ಸದಸ್ಯರಾದ ಬಾಬಾಜಾನ್ ಮತವಾಲೆ, ರಿಯಾಜ್ ಕಿಲ್ಲೆದಾರ್, ಇಮ್ರಾನ್ ಪತ್ತೆಖಾನ್, ಶಾಹೀದ್ ಪಠಾಣ, ಸಲ್ಮಾನ್ ಮಂಗಲಕಟ್ಟಿ ಇತರರಿದ್ದರು.
ದುರದೃಷ್ಟವಶಾತ್ ಬಾಲಕಿ ಸಾವನ್ನಪ್ಪಿದ್ದಾಳೆ, ಈಗಲೂ ಕರ್ನಾಟಕವು ಸಹೋದರತ್ವದ ಸಾರವನ್ನು ಹೊಂದಿದೆ. ಅದು ಭಾರತದ ಹೆಮ್ಮೆ. ಕರ್ನಾಟಕದ ಹೆಮ್ಮೆ.