ಚಾಮರಾಜನಗರ: ಕಾಂಗ್ರೆಸ್ಗೆ ಮೊದಲು ಕರೆಂಟ್ ಕಂಬ ನಿಲ್ಲಿಸಿದರೂ ಗೆಲ್ಲುವಂತಹ ಸ್ಥಿತಿಯಿತ್ತು ಆದರೆ ಈಗ ಪಕ್ಷಕ್ಕೆ ಅಂಬೇಡ್ಕರ್ ಅವರ ಶಾಪ ತಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ದೂರಿದ್ದಾರೆ. ಚಾಮರಾಜನಗರದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಬಿಜೆಪಿ ಈಗ ಕೇವಲ ಬ್ರಾಹ್ಮಣರ ಪಾರ್ಟಿಯಾಗಿ ಉಳಿದಿಲ್ಲ. ಇದು ಕೇವಲ ವಿದ್ಯಾವಂತರ ಪಕ್ಷವಲ್ಲ. ಕೇವಲ ನಗರ ಕೇಂದ್ರೀಕೃತ ಪಕ್ಷವಲ್ಲ. ಬಿಜೆಪಿ ಈಗ ಸರ್ವಸ್ಪರ್ಶಿ ಸರ್ವಗ್ರಾಹಿ ಪಕ್ಷವಾಗಿದೆ.
ಎಲ್ಲ ವರ್ಗಗಳ ಪಕ್ಷವಾಗಿ ದೇಶದ ಮೂಲೆಮೂಲೆಗಳಿಗೆ ವ್ಯಾಪಿಸಿದೆ ಎಂದು ಅವರು ಹೇಳಿದರು.
ಮೊದಲು ಒಂದು ಕಾಲವಿತ್ತು. ಆಗ ಕಾಂಗ್ರೆಸ್ನಿಂದ ಒಂದು ವಿದ್ಯುತ್ ಕಂಬ ನಿಲ್ಲಿಸಿದರು ಗೆಲುವು ನಿಶ್ಚಿತ ಎನ್ನುವಂತಿತ್ತು. ಅದರೆ ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ನಿಲ್ಲಲು ಕ್ಷೇತ್ರ ಹುಡುಕುವಂತಾಗಿದೆ. ಸಿದ್ದರಾಮಯ್ಯ ಅವರನ್ನು ಜನರು ವರುಣಾ ಕ್ಷೇತ್ರದಿಂದ ಗುಡಿಸಿ ಹೊರ ಹಾಕಿದರು. ಇದೆಲ್ಲ ಅಂಬೇಡ್ಕರ್ ಶಾಪದ ಪ್ರತಿಫಲ ಎಂದು ಅವರು ಹೇಳಿದರು.
ಅಂಬೇಡ್ಕರ್ಗೆ ಅತಿ ಹೆಚ್ಚ ದ್ರೋಹ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ಗೆ ಅಂಬೇಡ್ಕರ್ ಭಾವಚಿತ್ರ ಹಾಗೂ ಅವರ ಮತ ಬ್ಯಾಂಕ್ ಬೇಕಿತ್ತು ಆದರೆ ಅಂಬೇಡ್ಕರ್ ಬೇಡವಾಗಿದ್ದರು. ಸರ್ವಶ್ರೇಷ್ಠ ಸಂವಿಧಾನ ಕೊಟ್ಟವರು ಅಂಬೇಡ್ಕರ್. ಚಹಾ ಮಾರುವವರ ಮಗ ದೇಶದ ಪ್ರಧಾನಿ ಆಗಲು ಅಂಬೇಡ್ಕರ್ ಕಾರಣ. ಎಸ್ಸಿಎಸ್ಟಿ ಜನಾಂಗದ ಬಗ್ಗೆ ಕಣ್ಣೀರು ಹಾಕಿದ ಕಾಂಗ್ರೆಸ್ ಅವರನ್ನು ಉದ್ದಾರ ಆಗಲು ಬಿಡಲಿಲ್ಲ. ಶಿಕ್ಷಣ, ಉದ್ಯೋಗ ನೀಡದೆ ಕೇವಲ ಮತಬ್ಯಾಂಕ್ ಮಾಡಿಕೊಂಡಿತು ಎಂದು ನಳಿನ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.