ಕೋವಿಡ್ ತಡೆದಿದ್ದು ನಮ್ಮ ಅಹಾರ ಪದ್ದತಿ: ರವಿಶಂಕರ್ ಗುರೂಜಿ…!!!
ಬೆಂಗಳೂರು: ದೇಶದ ಸಮಸ್ತ ರೈತ ಸಮುದಾಯ ‘ನವೋದ್ಯಮ ಮತ್ತು ಸದೃಢ ಭಾರತಕ್ಕಾಗಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಂಕಲ್ಪ ತೊಡಬೇಕು ಎಂದು ಅರ್ಟ್ ಅಫ್ ಲೀವಿಂಗ್‌ನ ಡಾ. ರವಿಶಂಕರ ಗುರೂಜಿ ಸಲಹೆ ನೀಡಿದರು. ಬೆಂಗಳೂರಿನ ಹೆಸರಘಟ್ವದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ-ಐಐಎಚ್ಆರ್‌ನಲ್ಲಿ ಇಂದಿನಿಂದ ಆರಂಭಗೊಂಡಿರುವ ಐದು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ನಾವಿಂದು ಸ್ವಾಭಾವಿಕ ಹಾಗೂ ನೈಸರ್ಗಿಕ ಕೃಷಿಯನ್ನು ಮರೆತಿದ್ದೇವೆ. ನಮ್ಮ ಮಣ್ಣುಗಳನ್ನು ವಿಷಪೂರಿತಗೊಳಿಸಿದ್ದೇವೆ. ನಮ್ಮ ಭಾರತ ವಿಶ್ವದಲ್ಲೇ ವೈಶಿಷ್ಟಪೂರ್ಣ. ಋಷಿ-ಕೃಷಿ-ಖುಷಿ ದೇಶವಾಗಿದೆ. ಇಲ್ಲಿನ ಅಪಾರ ಸಸ್ಯ ಸಂಪತ್ತು ವಿಶ್ವಕ್ಕೆ ಮಾದರಿ. ನಮ್ಮಲ್ಲಿನ ಔಷಧೀಯ ಸಸ್ಯಗಳು, ವಿಶೇಷವಾಗಿ ತೋಟಗಾರಿಕಾ ಉತ್ಪನ್ನಗಳು ಅರಿಶಿನ, ಅಶ್ವಗಂಧ, ಬೇವು, ಶಂಕಪುಷ್ಠಿ ಮುಂತಾದವು ಇತರೆ ರಾಷ್ಟ್ರಗಳಲ್ಲಿ ಆರೋಗ್ಯವರ್ಧಕಗಳಾಗಿ ಹೆಸರುವಾಸಿಯಾಗಿವೆ ಎಂದರು.
ಕೋವಿಡ್ ತಡೆದಿದ್ದು ನಮ್ಮ ಆಹಾರ
ನಮಲ್ಲಿ ಬಳಸುವ ಅತ್ಯುದ್ಭುತ ರಸಂ ಅಮೆರಿಕದಲ್ಲಿ ವ್ಯೂಮಿನಿಟಿ ಬೂಸ್ಟರ್ ಆಗಿದೆ. ನಮಲ್ಲಿನ ಸಂಪತ್ತಿನಿಂದಾಗಿ ಡಿಸೆಂಬರ್ ಹೊತ್ತಿಗೆ ಗರಿಷ್ಠ ಪ್ರಮಾಣದಲ್ಲಿ ಕೊರೊನಾ
ಹಾನಿಯನ್ನುಂಟು ಮಾಡಬೇಕಾಗಿತ್ತು. ಆದರೆ, ನಮ್ಮ ಪದ್ಧತಿಗಳಿಂದಾಗಿ ಇಳಿಮುಖ ಕಂಡದ್ದು ಸ್ವಾಭಾವಿಕ ಸಂಪನ್ಮೂಲಗಳಿಂದ. ಐಐಎಚ್ಆರ್ ಬಿಡುಗಡೆಗೊಳಿಸಿದ ಆರ್ಕಾ ವ್ಯಾಪಾರ್ ಆಪ್ ದೇಶದ ರೈತರು ಮತ್ತು ಗ್ರಾಹಕರಿಗೆ ಒಂದು ವರದಾನ. ಇದರಿಂದಾಗಿ ಉತ್ಪಾದನೆಯ ಜೊತೆಗೆ ಮಾರುಕಟ್ಟೆ ವ್ಯವಸ್ಥೆಯೂ ಕೂಡ ಅರ್ಥಪೂರ್ಣವಾಗಲಿದೆ ಎಂದು ರವಿಶಂಕರ ಗುರೂಜಿ ಹೇಳಿದರು.
ಸವಾಲು ಎದುರಿಸಲು ಸಿದ್ಧ
ಭಾರತೀಯ ಕೃಷಿ ಸಂಶೋಧನಾ ಪರಿಷತ್ ಮಹಾನಿರ್ದೇಶಕ ಡಾ. ತ್ರಿಲೋಚನಾ ಮಹಾಪಾತ್ರ ಅವರು ಮಾತನಾಡಿ, ಸರ್ಕಾರದ ನೀತಿಗೆ ಬದ್ಧರಾಗಿ ರೈತರನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಸಚಿವಾಲಯ ಸರ್ವಸನ್ನದ್ಧವಾಗಿದೆ. ಕಾಲ ಕಾಲಕ್ಕೆ ಕೊರೊನಾದಂತಹ ಅನೇಕ ಸಂದಿಗ್ಧ ಸವಾಲುಗಳು ಎದುರಾದರೂ ಅವುಗಳನ್ನು ಕ್ರಮಬದ್ಧವಾಗಿ ನಿಬಾಯಿಸಲು ಕೂಡ ಸಚಿವಾಲಯ ಸಮರ್ಥವಾಗಿದೆ ಎಂದು ರೈತರಿಗೆ ಭರವಸೆ ನೀಡಿದರು.
ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ಮೋದಿ ಅವರ ಆಶೋತ್ತರದಂತೆ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ. ಸಮಗ್ರ ಬೇಸಾಯ ಪದ್ಧತಿಗಳು, ಕೃಷಿಯ ಸಂಸ್ಕರಣೆ, ಯಾಂತ್ರೀಕರಣದ ಬಗ್ಗೆ ರೈತರನ್ನು ಸನ್ನದ್ಧರಾಗಿಸಲು ಐಐಎಚ್ಆರ್ ಮತ್ತು ಐಐಸಿಆರ್ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತೀವೆ ಎಂದು ಡಾ. ತ್ರಿಲೋಚನಾ ಮಹಾಪಾತ್ರ ಹೇಳಿದರು.
ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜ
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್. ದಿನೇಶ್, ಕಳೆದ ಐದು ದಶಕಗಳಿಂದ ಸಾಕಷ್ಟು ತಳಿ ಮತ್ತು ತಂತ್ರಜ್ಞಾನವನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. 400ಕ್ಕೂ ಹೆಚ್ಚು ತಂತ್ರಜ್ಞಾನವನ್ನು ಆವಿಷ್ಕಾರಿಸಿದೆ. 50 ಸಾವಿಕ್ಕೂ ಅಧಿಕ ರೈತರು ವಿವಿಧ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ, ತೋಟಗಾರಿಕೆ ಬೇಸಾಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಪೈಪೋಟಿ ನಡೆಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆತನ್ನನ್ನು ತಾನು ಸಜ್ಜುಗೊಳಿಸಿದೆ. ಆನ್ಲೈನ್ ಸೀಡ್ ಪೋರ್ಟಲ್ ಮೂಲಕ ಸುಮಾರು 40 ವಿವಿಧ ತರಕಾರಿ ಮತ್ತು ಹೂಗಳ ಬೀಜಗಳನ್ನು ದೇಶದ ಮೂಲೆ ಮೂಲೆಯಲ್ಲಿರುವ ರೈತರ ಮನೆ ಬಾಗಿಲಿಗೆ ಅತ್ಯಂತ ಕಡಿಮೆ ದರದಲ್ಲಿ ತಲುಪಿಸುವ ವ್ಯವಸ್ಥೆಯನ್ನು ಎಂದು ಡಾ. ಎಂ.ಆರ್. ದಿನೇಶ್ ತಿಳಿಸಿದರು.
ರೈತರ ಆದಾಯ ದ್ವಿಗುಣ
ವರ್ಚಯಲ್ ಮೂಲಕ ಮಾತನಾಡಿದ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ತೋಟಗಾರಿಕೆಯ ಉಪಮಹಾನಿರ್ದೇಶಕ ಡಾ. ಎ.ಕೆ. ಸಿಂಗ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಜ್ಞಾನ-ವಿಜ್ಞಾನ-ತಂತ್ರಜ್ಞಾನ ತಲುಪಿಸುವ ಕೆಲಸ ಮಾಡುತ್ತಿವೆ. ರೈತರು ತಮ್ಮ ಆದಾಯವನ್ನು ಯಾವ ರೀತಿ ದ್ವಿಗುಣಗೊಳಿಸಬಹುದು ಎನ್ನುವ ಕುರಿತು ಸರ್ಕಾರಗಳು, ಕೃಷಿ, ತೋಟಗಾರಿಕಾ ಸಂಶೋಧನಾ ಸಂಸ್ಥೆಗಳು ರೈತರಿಗೆ ಅಗತ್ಯ ಮಾಹಿತಿ ನೀಡುತ್ತಿವೆ. ರೈತರು ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಸಮಗ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡುತ್ತಿವೆ ಎಂದು ಹೇಳಿದರು.