ನೆಲ್ಯಾಡಿ: ಲಾರಿ ಚಾಲಕರೋರ್ವರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಬಳಿಯ ಶಿರಾಡಿ ಘಾಟ್‌ನ ಕೆಂಪುಹೊಳೆ ಸಮೀಪ ಗುರುವಾರ ರಾತ್ರಿ ನಡೆದಿದೆ.
ಮೃತ ಲಾರಿ ಚಾಲಕ ರಾಜಸ್ಥಾನ ಮೂಲದವನೆಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿಯ ಚಾಲಕ ಕೆಂಪುಹೊಳೆ ಸಮೀಪ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ವೇಳೆ ಕಾಡಾನೆ ಅವರ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೃತದೇಹವನ್ನು ಸಕಲೇಶಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕೆಂಪುಹೊಳೆ ಪ್ರದೇಶದಲ್ಲಿ ಕಾಡಾನೆ ರಸ್ತೆಯಲ್ಲಿ ಓಡಾಟ ನಡೆಸಿದ್ದು ಇದರಿಂದಾಗಿ ವಾಹನ ಸಂಚಾರದಲ್ಲೂ ಅಡಚಣೆ ಉಂಟಾಗಿದ್ದು, ವಾಹನ ಸವಾರರು ಭಯಭೀತರಾಗಿ ವಾಹನ ಓಡಾಟ ನಡೆಸುವಂತಾಗಿದೆ.