Saturday, September 30, 2023
Homeಕರಾವಳಿಸರಿಯಾದ ಸೇತುವೆಯಂತೂ ಇಲ್ಲ, ರಸ್ತೆಯ ವ್ಯವಸ್ಥೆ ಕೂಡಾ ಇಲ್ಲವೇ ಇಲ್ಲ… ...

ಸರಿಯಾದ ಸೇತುವೆಯಂತೂ ಇಲ್ಲ, ರಸ್ತೆಯ ವ್ಯವಸ್ಥೆ ಕೂಡಾ ಇಲ್ಲವೇ ಇಲ್ಲ… ಈ ಪ್ರದೇಶದ ಜನರು ಅನುಭವಿಸುತ್ತಿದ್ದಾರೆ ಅತೀವ ನರಕಯಾತನೆ… ಇಲ್ಲಿನ ನಿವಾಸಿಗಳ ಗೋಳು ಕೇಳುವವರ್ಯಾರು…?

- Advertisement -Renault

Renault
Renault

- Advertisement -

ಬಂಟ್ವಾಳ : ನಮ್ಮ ಈ ದೇಶದಲ್ಲಿ ಹಲವಾರು ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಕರ್ನಾಟಕದಲ್ಲೂ ಕೂಡಾ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನೋಡುತ್ತಿದ್ದೇವೆ. ದಕ್ಷಿಣ ಕನ್ನಡದ ಬಂಟ್ವಾಳದ ಒಂದು ಪ್ರದೇಶವೊಂದು ಹಲವು ವರ್ಷಗಳಿಂದ ಒಂದು ಮಟ್ಟಿನ ಅಭಿವೃದ್ಧಿಗಾಗಿ ಆಶಿಸುತ್ತಿದೆ. ಕಲ್ಲಡ್ಕ ಸಮೀಪ ಕರಿಂಗಾಣವೆಂಬ ಊರಿನಲ್ಲಿರುವ ಈ ಪ್ರದೇಶವೇ ಕಲ್ಲಗುಂಡಿ. ಸಜಿಪ ಮೂಡ ಗ್ರಾಮದಲ್ಲಿ ಇರುವಂತಹ ಈ ಕಲ್ಲಗುಂಡಿ ಪ್ರದೇಶವು ಮುಖ್ಯವಾಗಿ ಎರಡು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದು ಸೇತುವೆ, ಮತ್ತೊಂದು ರಸ್ತೆಯ ಕೊರತೆ.

ಕಲ್ಲಗುಂಡಿಯಲ್ಲಿ ಸದ್ಯದ ಮಟ್ಟಿಗೆ ಇರುವುದು ಅಡಿಕೆ ಮರದ ಸೇತುವೆಯಾಗಿದೆ. ಆರು ಅಡಿಕೆ ಮರ ಹಾಗೂ ೨ ಕಬ್ಬಿಣದ ತಂತಿಯೇ ಇಲ್ಲಿನ ಸೇತುವೆಯಾಗಿದೆ. ಇಂತಹ ಅಪಾಯಕಾರಿ ಸೇತುವೆ ಯಾವುದೇ ಕ್ಷಣದಲ್ಲಿ ಅನಾಹುತಕ್ಕೀಡಾಗಬಹುದು. ಕಲ್ಲಗುಂಡಿ ಪ್ರದೇಶ ಸೃಷ್ಟಿಯಾದಾಗಿನಿಂದ ಸರಿಯಾದ ಸಮರ್ಪಕ ಸೇತುವೆಯನ್ನೇ ಕಂಡಿಲ್ಲ. ಸುಮಾರು ೫೦ ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಜನರು ಅಡಿಕೆಮರವನ್ನೇ ಸೇತುವೆಯಾಗಿ ಬದಲಿಸುತ್ತಿದ್ದಾರೆ. ಪ್ರತಿವರ್ಷ ಇದುವೇ ಸರಾಗವಾಗಿ ಹೋಗಿದೆ ಇಲ್ಲಿನ ನಿವಾಸಿಗಳಿಗೆ.

ಕಲ್ಲಗುಂಡಿ ಪ್ರದೇಶದಲ್ಲಿ ೧೫ ರಿಂದ ೨೦ ಮನೆಗಳು , ೫೦ ರಿಂದ ೬೦ ಜನರು ವಾಸಿಸುತ್ತಿದ್ದಾರೆ. ಹಲವಾರು ಮಕ್ಕಳು ಶಾಲೆಗೆ ಹಾಗೂ ದೊಡ್ಡವರು ಕೆಲಸಕ್ಕೆ ಹೋಗಲು ಇದೇ ಸೇತುವೆ ಪ್ರಮುಖ ಕೊಂಡಿಯಾಗಿದೆ. ಇಲ್ಲಿನ ನಿವಾಸಿಗಳ ಮನೆಯಲ್ಲಿ ಮದುವೆ ಮುಂಜಿ, ಇನ್ನಿತರ ಕಾರ್ಯಕ್ರಮಗಳೇನಾದರೂ ನಡೆದರೆ, ಅವರು ಖಂಡಿತವಾಗಿಯೂ ಹರಸಾಹಸ ಪಡಬೇಕಾಗುತ್ತದೆ. ದೇವಸ್ಥಾನ, ಚರ್ಚ್, ಮಸೀದಿ ಗಳಿಗೆ ಅತ್ತಿಂದಿತ್ತ ಚಲಿಸುವವರು ಬಹಳಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಯಾರಾದರೂ ಅಸೌಖ್ಯ ಹೊಂದಿದರೆ, ಎಮರ್ಜೆನ್ಸಿ ಸಮಯದಲ್ಲಿ ತುಂಬಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿರುವುದರಿಂದಾಗಿ ವೈದ್ಯರ ಬಳಿ ಬೇಟಿನೀಡಲು ಹರಸಾಹಸ ಪಡುತ್ತಿದ್ದಾರೆ. ವಯಸ್ಸಾದವರು, ವೃದ್ಧರು ಅತ್ತಿಂದಿತ್ತ ಚಲಿಸಲು ಹಿಂದೆಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಮಹಿಳೆಯರೂ ಕೂಡಾ ಭಯಪಟ್ಟು ಸಂಚರಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳ ಮನೆಗಳಿಗೆ ಅತಿಥಿಗಳು ಬರುವ ಹಾಗಿಲ್ಲ, ಏಕೆಂದರೆ ಇವರು ಮಳೆಯ ಸಮಯವೇ ಇರಲಿ, ಇನ್ನುಳಿದ ಸಮಯವೇ ಇರಲಿ ಕಷ್ಟವನ್ನೇ ಎದುರಿಸಬೇಕಾಗುತ್ತದೆ. ಜಾನುವಾರುಗಳಿಗೂ ಅತ್ತಿಂದಿತ್ತ ಚಲಿಸಲು ಹಾಗೂ ಅವುಗಳ ಆಹಾರವನ್ನೂ ಸಾಗಿಸಲು ಕಷ್ಟಪಡುವಂತಾಗಿದೆ. ಹಾಲನ್ನು ಸಾಗಿಸಲು ಮತ್ತು ಇಲ್ಲಿನ ನಿವಾಸಿಗಳಿಗೆ ತಮ್ಮ ದೈನಂದಿನ ಆಹಾರ ಸಾಮಾಗ್ರಿಗಳನ್ನು ಕೊಂಡೊಯ್ಯಲು ತೀವ್ರ ಸಂಕಷ್ಟ ಕಾಣುವಂತಾಗಿದೆ. ಸುಮಾರು ೨೦ ವರ್ಷಗಳ ಹಿಂದೆ ಮಕ್ಕಳು ಶಾಲೆಯಿಂದ ಹಿಂದಿರುಗುವಾಗ, ಮಕ್ಕಳು ಸೇತುವೆ ದಾಟಲು ಹೆದರುತ್ತಿದ್ದರಿಂದ, ಸೇತುವೆ ಹತ್ತಿರ ಬಂದಿದ್ದೇವೆಯೆಂದು ಸೂಚನೆ ನೀಡುವುದಕ್ಕಾಗಿ ಘಂಟೆಯೊಂದನ್ನು ಬಾರಿಸಲು ದೂರದಲ್ಲಿ ಇಟ್ಟಿದ್ದರು ಎಂದು ಮಾಹಿತಿ ದೊರಕಿದೆ. ಮಕ್ಕಳು ಶಾಲೆಗೆ ಹೋಗಿ ಬರುವವರೆಗೆ ಹೆತ್ತವರು ಈಗಲೂ ಕೂಡಾ ತುಂಬಾ ಉದ್ವೇಗದಲ್ಲಿರುತ್ತಾರೆ. ಮಕ್ಕಳು ಶಾಲೆಗೆ ಹೋಗುವ ಸಂಧರ್ಭದಲ್ಲಿ ಸೇತುವೆ ದಾಟಿಸಲು ಹಾಗೂ ಹಿಂದಿರುಗುವ ಸಂಧರ್ಭದಲ್ಲಿ ಕರೆತರಲು ಸೇತುವೆಯ ಬಳಿ ಕಾದುಕುಳಿತಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈಗಿರುವ ಸೇತುವೆ ಸ್ವಲ್ಪ ಉದ್ದಳತೆಯಲ್ಲಿ ಕಿರಿದಾಗಿದ್ದು, ಕೆಲವು ವರ್ಷಗಳ ಹಿಂದೆ ಸೇತುವೆಯ ಅಳತೆ ಈಗಿನದಕ್ಕಿಂತ ದುಪ್ಪಟ್ಟು ಇತ್ತು ಎಂದು ಮಾಹಿತಿ ದೊರಕಿದೆ. ಈ ಅಸಮರ್ಪಕ ಸಂಪರ್ಕ ರಸ್ತೆ ಹಾಗೂ ಸೇತುವೆಯು ಕಲ್ಲಗುಂಡಿಯ ನಿವಾಸಿಗಳಿಗೆ ಅತೀ ಹತ್ತಿರವಾಗಿದ್ದು, ಇನ್ನೊಂದು ಲಭ್ಯವಿರುವ ರಸ್ತೆಯು ಸುತ್ತುಬಳಸಿ ಸುಮಾರು ೫ ಕಿಲೋಮೀಟರ್ ದೂರದ್ದಾಗಿದೆ. ಹಾಗಾಗಿ ಇಲ್ಲಿನ ನಿವಾಸಿಗಳಿಗೆ ಇದು ಅತೀ ಕಠಿಣ ಸಮಸ್ಯೆಯಾಗಿದೆ. ಸಜಿಪ ಮೂಡ ಹಾಗೂ ಗೋಳ್ತಮಜಲು ಗ್ರಾಮದ ಜನರು ಈ ಪ್ರದೇಶದ ಮೂಲಕ ಸಂಚರಿಸುತ್ತಿರುತ್ತಾರೆ.

ಮಳೆಗಾಲದಲ್ಲಿ  ಇಲ್ಲಿನ ನಿವಾಸಿಗಳಿಗೆ ಲಾಕ್ಡೌನ್ ನಂತೆ ಭಾಸವಾಗುತ್ತದೆ ಏಕೆಂದರೆ ಅಂತಹ ಸಂಕಷ್ಟವನ್ನು ಅವರು ಕಂಡಿದ್ದಾರೆ. ಅಧಿಕ ಪ್ರಮಾಣದಲ್ಲಿ ಮಳೆಬಂದಾಗ ಈ ಸೇತುವೆಯೂ ಕೂಡಾ ಕೊಚ್ಚಿಹೋಗುತ್ತದೆ. ತೋಟದಲ್ಲೆಲ್ಲಾ ನೀರು ತುಂಬಿ ನೆರೆಪ್ರವಾಹ ಉಂಟಾಗುತ್ತದೆ. ಸೇತುವೆಯ ಮೇಲಿನ ವರೆಗೆ ನೀರು ತುಂಬಿಹೋಗಿರುತ್ತದೆ. ಸೇತುವೆಯು ಕೊಚ್ಚಿಹೋದಲ್ಲಿ ಅಥವಾ ಹಾಳಾದಲ್ಲಿ, ನೀರಿರುವ ಈ ತೊರೆಯನ್ನು ದಾಟುವುದು ಕಷ್ಟ ಸಾಧ್ಯವಾಗಿದೆ. ಹೀಗೆ ದಾಟಲು ಹೋಗಿ ಅಪಾಯಕ್ಕೀಡಾದ ಘಟನೆಗಳೂ ಕೂಡಾ ನಡೆದಿವೆ. ಈ ಅಡಿಕೆ ಮರದ ಸೇತುವೆ ಮಾಡಲು ಕನಿಷ್ಟ ೪ ದಿನ ತಗುಲುತ್ತದೆ. ಈ ಪ್ರದೇಶದ ೨ ರಿಂದ್ ೩ ಮನೆಯ, ೧೦ ರಿಂದ ೧೫ ಜನರು ಸೇರಿ ಕೆಲಸ ಮಾಡುತ್ತಾರೆ, ಇದಕ್ಕೆ ಸಾಕಷ್ಟು ಕರ್ಚುವೆಚ್ಚಗಳೂ ಕೂಡಾ ತಗುಲುತ್ತದೆ. ಇದಕ್ಕೆ ಸ್ಥಳೀಯ ಪಂಚಾಯತ್ ನಿಂದ ಯಾವುದೇ ಅನುದಾನ ಕೂಡಾ ದೊರಕುವುದಿಲ್ಲ ಎಂದು ತಿಳಿದುಬಂದಿದೆ.

ಸಜಿಪ ಮೂಡ ಗ್ರಾಮ ಪಂಚಾಯತ್ ನವರಾಗಲೀ, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾಗಲಿ, ಗೋಳ್ತಮಜಲ್ ಗ್ರಾಮ ಪಂಚಾಯತ್ ಸದಸ್ಯರಾಗಲೀ, ಯಾರಿಗೂ ಮನವಿ ನೀಡಿದರೂ ಕೂಡಾ ಅಷ್ಟೇನು ಸ್ಪಂದಿಸುತ್ತಿಲ್ಲ. ಪ್ರತೀವರ್ಷ ಮನವಿ ನೀಡಿದರೂ ಯಾರೊಬ್ಬರೂ ಕೂಡಾ ಸರಿಯಾಗಿ ಸ್ಪಂದಿಸುತ್ತಿಲ್ಲ. ಸೇತುವೆಯಂತೂ ಇಲ್ಲವೇ ಇಲ್ಲ, ಸಮರ್ಪಕ ರಸ್ತೆಯ ವ್ಯವಸ್ಥೆ ಕೂಡಾ ಇಲ್ಲದ ಹಾಗಿದೆ. ಮಾಜಿ ಶಾಸಕರು, ಹಾಲಿ ಶಾಸಕರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ನಾಯಕರುಗಳು, ಸ್ಥಳೀಯ ನಾಯಕರುಗಳು, ಈ ಹಿಂದಿನ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಹಾಲಿ ಪಂಚಾಯತ್ ಸದಸ್ಯರುಗಳು ಅನುಸಂಧಾನ ಹಾಗೂ ಇತ್ತ ಗಮನಹರಿಸಲು ಮನವಿ ನೀಡಲಾಗಿತ್ತು ಮತ್ತು ನೀಡಲಾಗಿದೆ.

ಸುಮಾರು ವರ್ಷಗಳಿಂದ ಸರ್ಕಾರ ಹಾಗೂ ಪ್ರತಿನಿಧಿಗಳಿಗೆ ಮನವಿ ನೀಡಿದರೂ ಇನ್ನೂ ಏನೂ ವ್ಯವಸ್ಥೆ ಮಾಡಿಲ್ಲವಾಗಿದೆ. ಈ ಸಲವೂ ಶಾಸಕ ಹಾಗೂ ಇಲ್ಲಿನ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇವೆ. ಖಂಡಿತ ಈ ಕಾರ್ಯವನ್ನು ಮಾಡುತ್ತೇವೆ ಎಂದು ಭರವಸೆ ಕೂಡಾ ನಿಡಿದ್ದಾರೆ. ಇನ್ನು ಮೇಲಾದರೂ ಈ ಕೆಲಸ ಪೂರ್ಣವಾಗಬಹುದೆಂಬುದು ಇಲ್ಲಿನ ನಿವಾಸಿಗಳ ಆಶಯವಾಗಿದೆ. ಕಲ್ಲಗುಂಡಿಯ ನಿವಾಸಿಗಳ ಜೀವನ ಬಾರೀ ಕಷ್ಟಕರವಾಗಿದೆ. ಕಿಲೋಮೀಟರ್ ಗಟ್ಟಲೆ ನಡೆದುಕೊಂಡೇ ಬರುವಂತಹ ದಾರಿ, ಗುಡ್ಡಗಾಡು ಪ್ರದೇಶದಲ್ಲಿ ಮನೆ, ಸರಿಯಾಗಿ ಮೂಲಭೂತ ಸೌಕರ್ಯಗಳೂ ಕೂಡ ಲಭ್ಯವಿಲ್ಲವಾಗಿದೆ. ಆದ್ದರಿಂದ ಆದಷ್ಟು ಬೇಗ ಜನಪ್ರತಿನಿಧಿಗಳು ನಿವಾಸಿಗಳ ಮನವಿಗೆ ಸ್ಪಂದಿಸಿ, ಸೇತುವೆ ಹಾಗೂ ರಸ್ತೆ ನಿರ್ಮಾಣವಾಗುವ ಹಾಗೆ ಮಾಡಬೇಕೆಂಬುದು ಇಲ್ಲಿನ ಎಲ್ಲಾ ನಿವಾಸಿಗಳ ಒಕ್ಕೊರಲಿನ ಅಗ್ರಹವಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments