ಮಂಗಳೂರು, ಫೆ.18: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ ಖಾದರ್ ಸೋದರ ಡಾ.ಯು.ಟಿ. ಇಫ್ತಿಕಾರ್ ಆಲಿಗೆ ಸೇರಿದ ಮಂಗಳೂರಿನ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಗಳೂರಿನ ಲೈಟ್ ಹೌಸ್ ಹಿಲ್ ರೋಡ್ ನಲ್ಲಿರುವ Mohtisham Acropolis ಅಪಾರ್ಟ್ ಮೆಂಟ್ ನಲ್ಲಿ ಇಫ್ತಿಕಾರ್ ಮನೆಯಿದ್ದು ಅಲ್ಲಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಇಫ್ತಿಕಾರ್ ಈಗಾಗ್ಲೇ ಐಟಿ ದಾಳಿಗೆ ಒಳಗಾಗಿರುವ ಪ್ರತಿಷ್ಠಿತ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ಆಡಳಿತದಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದು ಬೆಳಗ್ಗಿನಿಂದ ದಾಳಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ಎಂಟನೇ ಮಹಡಿಯಲ್ಲಿ ಇಫ್ತಿಕಾರ್ ಮನೆಯಿದ್ದು ಮೈಸೂರಿನಿಂದ ಬಂದ ಐಟಿ ಅಧಿಕಾರಿಗಳ ತಂಡ ಮನೆಯಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ.
ಇಫ್ತಿಕಾರ್ ಮೂಲತಃ ಫಿಸಿಯೋಥೆರಪಿ ಪ್ರೊಫೆಸರ್ ಆಗಿದ್ದು ಇದರ ನಡುವೆ ಕಾಂಗ್ರೆಸ್ ಪಕ್ಷದಲ್ಲಿಯೂ ಗುರುತಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಜೊತೆ ನಿಕಟ ಸಂಬಂಧ ಇರಿಸಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ರಾಜೀವ ಗಾಂಧಿ ವಿವಿಯಲ್ಲಿ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು.