ಕೋಲ್ಕತ್ತಾ, ಫೆಬ್ರುವರಿ 15: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಗುದ್ದಾಟವೂ ಕಾವೇರುತ್ತಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ವಾಗ್ಯುದ್ಧಗಳ ಸರಣಿಯೇ ನಡೆಯುತ್ತಿದೆ.
ಭಾನುವಾರ ಬಿಜೆಪಿ ಪ್ರಚಾರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್, ತೃಣಮೂಲ ಕಾಂಗ್ರೆಸ್‌ಗೆ ಹೊಸದೊಂದು ಎಚ್ಚರಿಕೆ ನೀಡಿದ್ದಾರೆ. “ನಮ್ಮ ಪಕ್ಷ ಕಾನೂನನ್ನು ಪಾಲಿಸುತ್ತಿದೆ. ಹಾಗೆಂದು ನಮ್ಮನ್ನು ದುರ್ಬಲ ಎಂದು ಪರಿಗಣಿಸಬೇಡಿ” ಎಂದಿದ್ದಾರೆ. ನಮ್ಮ ಆಟ ಈಗ ಶುರುವಾಗುತ್ತಿದೆ. ಜಯ ಏನಿದ್ದರೂ ನಮ್ಮ ಪರ ಎಂದು ತೃಣಮೂಲ ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.
“ನಮ್ಮ ಆಟ ಈಗ ಶುರುವಾಗಿದೆ”
ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗೆದ್ದೇ ಗೆಲ್ಲುತ್ತದೆ ಎಂಬುದನ್ನು ಮಮತಾ ದೀದಿ ಸಹೋದರರಿಗೆಲ್ಲಾ ಹೇಳಲು ಇಷ್ಟಪಡುತ್ತೇನೆ.
ಬಂಗಾಳದಲ್ಲಿ ಬಿಜೆಪಿ ರಥಯಾತ್ರೆಗೆ ಅಡ್ಡಿಪಡಿಸುತ್ತಿರುವುದು ತಿಳಿದುಬಂದಿದೆ. ನಮ್ಮ ಆಟ ಮುಗಿಯಿತು ಎಂದು ನಮ್ಮ ವಿರೋಧಿಗಳು ಹೇಳುತ್ತಿದ್ದಾರೆ. ಆದರೆ ನಮ್ಮ ಆಟ ಈಗ ಶುರುವಾಗಿದೆ. ನೀವು ಸಿದ್ಧವಾಗಿರಿ ಎಂದು ದಿಲೀಪ್ ಘೋಷ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕವಾಗಿಯೇ ಎಚ್ಚರಿಕೆ ನೀಡಿದ ಬಿಜೆಪಿ ಮುಖ್ಯಸ್ಥ.
ಚುನಾವಣೆ ನಂತರ ತಮ್ಮ ಮಕ್ಕಳ ಮುಖವನ್ನು ನೋಡಬೇಕಿದ್ದರೆ, ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ತಾಯಂದಿರಿಗೆ ಹೇಳಿ ಎಂದು ಟಿಎಂಸಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನಾವು ನಾಗರಿಕರು ಹಾಗೂ ಕಾನೂನನ್ನು ಪಾಲಿಸುವವರು. ಇದರರ್ಥ ನಾವು ದುರ್ಬಲರು ಎಂದಲ್ಲ ಎಂದು ತೃಣಮೂಲ ಕಾಂಗ್ರೆಸ್‌ಗೆ ಸಾರ್ವಜನಿಕವಾಗಿಯೇ ಎಚ್ಚರಿಕೆ ನೀಡಿದ್ದಾರೆ.
“ಗಾಯ ಮುಚ್ಚಿ ಹಾಕಲು ಬ್ಯಾಂಡೇಜ್ ಕೂಡ ಸಾಲುವುದಿಲ್ಲ”
ಕಳೆದ ಡಿಸೆಂಬರ್ ನಲ್ಲಿ ಕೂಡ ದಿಲೀಪ್ ಘೋಷ್ ಟಿಎಂಸಿ ವಿರುದ್ಧ ಹರಿಹಾಯ್ದಿದ್ದರು. “ನಿಮ್ಮ ಗಾಯ ಮುಚ್ಚಿ ಹಾಕಲು ಬ್ಯಾಂಡೇಜ್ ಕೂಡ ಸಾಲುವುದಿಲ್ಲ ಹಾಗಾಗುತ್ತದೆ” ಎಂದು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ವಿರುದ್ಧ ಮಾತನಾಡಿದ್ದರು. ಇದೇ ಏಪ್ರಿಲ್ ಹಾಗೂ ಮೇನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದೀಗ ಮತ್ತೆ ಬಿಜೆಪಿ ಟಿಎಂಸಿ ನಡುವೆ ವಾಗ್ಯುದ್ಧ ಆರಂಭವಾಗಿದೆ.
ದಿಲೀಪ್ ಘೋಷ್ ಮತ್ತೊಂದು ವಿವಾದಾತ್ಮಕ ಹೇಳಿಕೆ.
ವಿವಾದಾತ್ಮಕ ಹೇಳಿಕೆಗಳನ್ನು ನೀಡುವಲ್ಲಿ ಹೆಸರಾಗಿರುವ ಬಿಜೆಪಿ ಮುಖಂಡ ದಿಲೀಪ್ ಘೋಷ್, ಈ ಬಾರಿ ಟಿಎಂಸಿ ವಿರುದ್ಧ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ನಮ್ಮ ಪಕ್ಷ ನಾಗರೀಕವಾಗಿ, ಕಾನೂನಿನ ಹಾದಿಯಲ್ಲಿ ರಾಜಕೀಯ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಆದರೆ ತಮ್ಮ ತಂಟೆಗೆ ಬಂದರೆ ನಾವು ಬಿಡುವುದಿಲ್ಲ. ನಮ್ಮ ಕೈ ಕಾಲುಗಳು ಕೆಲಸ ಮಾಡುತ್ತಿವೆ. ಅದನ್ನು ನಾವು ಬಳಸಿದರೆ ಪರಿಸ್ಥಿತಿ ಮಿತಿ ಮೀರುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.