ಮಂಗಳೂರು, (ಜ.30): ಕಲ್ಲಡ್ಕ ಪ್ರಭಾಕರ ಭಟ್‌ಗೆ ಕೊರಗಜ್ಜ ದೈವದ ಶಾಪ ತಟ್ಟಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ., (ಜ.30): ಕಲ್ಲಡ್ಕ ಪ್ರಭಾಕರ ಭಟ್‌ಗೆ ಕೊರಗಜ್ಜ ದೈವದ ಶಾಪ ತಟ್ಟಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಉಳ್ಳಾಲ ಪಾಕಿಸ್ತಾನ, ಮುಸ್ಲಿಮೇತರ ಶಾಸಕರನ್ನ ತಾಕತ್ತಿದ್ರೆ ಆಯ್ಕೆ ಮಾಡಿ ಎನ್ನುವ ಕಲ್ಲಡ್ಕ ಭಟ್ ಹೇಳಿಕೆಗೆ ಮಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿರುವ ಖಾದರ್, ಕಲ್ಲಡ್ಕ ಪ್ರಭಾಕರ ಭಟ್ ಮತ್ತೆ ಮಾತಾನಾಡಿದ್ದಾರೆ, ಅದಕ್ಕೆ ಮಹತ್ವ ಕೊಡಲ್ಲ. ಆವತ್ತು ಅಂತ್ಯಸಂಸ್ಕಾರ ಮಾಡಿದ್ದು ನಮ್ಮ ಕಾಂಗ್ರೆಸ್ ಕಾರ್ಯಕರ್ತರು. ಉಳ್ಳಾಲದ ಜನ ಕಷ್ಟದಲ್ಲಿದ್ದಾಗ ಇವರು ಬಂದು ಕಷ್ಟ ಆಲಿಸಿಲ್ಲ. ಮೊನ್ನೆ ಗ್ರಾಮ ಪಂಚಾಯಿತಿ ಚುನಾವಣೆ ಮೊದಲು ಒಂದು ಗ್ರಾಮದಲ್ಲಿ ಮಾತನಾಡಿದ್ರು. ಆದ್ರೆ, ಅಲ್ಲಿ ಬಿಜೆಪಿಗೆ ಸೊನ್ನೆ ಸಿಕ್ಕಿ ಸೋತಿದೆ ಎಂದು ಲೇವಡಿ ಮಾಡಿದರು.
ಉಳ್ಳಾಲವನ್ನು ಪಾಕಿಸ್ತಾನ ಎಂದ ಕಲ್ಲಡ್ಕ ಪ್ರಭಾಕರ್ ಭಟ್.
ಈ ಹಿಂದೆ ಅವರು ತುಳುನಾಡಿನ ಕೊರಗಜ್ಜ ದೈವ ಮತ್ತು ಪಾತ್ರಿಯನ್ನು ದೂಷಿಸಿದ್ದರು. ನನ್ನ ಪ್ರಕಾರ ಕೊರಗಜ್ಜ ದೈವದ ಶಾಪ ಅವರಿಗೆ ಇದೆ. ಹೀಗಾಗಿ ಅವರು ನಿಮಿಷಕ್ಕೊಂದು ದೇಶಕ್ಕೆ ಮತ್ತು ಸಮಾಜಕ್ಕೆ ಮಾರಕವಾಗೋ ವಿಚಾರ ಮಾತನಾಡ್ತಾರೆ ಎಂದು ವ್ಯಂಗ್ಯವಾಡಿದರು.
ಅವರಿಗೆ ಸರ್ವಧರ್ಮದ ದೇವರು ಒಳ್ಳೆಯ ಬುದ್ದಿ ಕೊಡಲಿ ಅಷ್ಟೇ. ನನ್ನ ಕ್ಷೇತ್ರದ ಜನರು ಮಾನವೀಯತೆ ಮತ್ತು ಅಭಿವೃದ್ಧಿ ಆಧಾರದಲ್ಲಿ ನನ್ನನ್ನ ಆಯ್ಕೆ ಮಾಡಿದ್ದಾರೆ. ಆದ್ರೆ ಕಲ್ಲಡ್ಕ ಪ್ರಭಾಕರ ಭಟ್ ನನ್ನ ಕ್ಷೇತ್ರದವರಲ್ಲ, ಅವರು ಹೊರಗಿನವರು ಎಂದು ಟಾಂಗ್ ಕೊಟ್ಟರು.
ಭಾರತದ ಒಂದು ಪ್ರದೇಶವನ್ನ ಪಾಕಿಸ್ತಾನ ಅಂತ ಕರೆದರೆ ಅದು ದೇಶದ್ರೋಹ. ಉಳ್ಳಾಲ ಕ್ಷೇತ್ರದಲ್ಲಿ ಈ ಹಿಂದೆ ಬೇರೆ ಧರ್ಮದವರು ಕೂಡ ಶಾಸಕರಾಗಿದ್ದಾರೆ. ಕೋವಿಡ್ ಬಂದಾಗ ಕಲ್ಲಡ್ಕ ಪ್ರಭಾಕರ ಭಟ್ ಎಲ್ಲಿದ್ದರು? ಯಾರಾದ್ರೂ ಹಿಂದೂ ಸಹೋದರ ಹೇಗಿದ್ದಾನೆ ಅಂತ ಆಸ್ಪತ್ರೆಗೆ ಹೋಗಿ ನೋಡಿದ್ರಾ? ಯಾರಾದರೂ ಜನಸಾಮಾನ್ಯರ ಕಣ್ಣೊರೆಸೋ ಕೆಲಸ ಕಲ್ಲಡ್ಕ ಭಟ್ ಮಾಡಿದ್ರಾ? ಕೋವಿಡ್ ಅಂತ್ಯಸಂಸ್ಕಾರದ ವೇಳೆ ಕಲ್ಲಡ್ಕ ಭಟ್ ಯಾಕೆ ಮನೆಯಿಂದ ಹೊರಗೆ ಬರಲಿಲ್ಲ? ಎಂದು ಪ್ರಶ್ನಿಸಿದರು.