ಪಡುಬಿದ್ರಿ : ಉಡುಪಿ ಜಿಲ್ಲೆಯ ಇಲ್ಲಿನ ಎರ್ಮಾಳು ಕಡಲಕಿನಾರೆಯಲ್ಲಿ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ಪೂರಕವಾಗಿ ಅಳವಡಿಸಲಾಗಿರುವ ಸುಮಾರು 100 ಮೀ. ಉದ್ದದ ಪೈಪ್ ಲೈನ್ ಒಡೆದು ಹೋಗಿ ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಯುಪಿಸಿಎಲ್ ಕಂಪನಿ ಯಾವುದೇ ಸೂಕ್ತ ಕ್ರಮ ಕೈಗೊಂಡಿರದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.
ಯುಪಿಸಿಎಲ್ ನಿಂದ ಹೊರ ಎಸಯಲ್ಪಡುವ ಬಿಸಿ ನೀರು ಕಡಲ ಗರ್ಭಕ್ಕೆ ಸೇರಿ ಕಡಲಿನ ಪ್ರಾಕೃತಿಕ ವ್ಯತ್ಯಯಕ್ಕೆ ಕಾರಣವಾಗುತ್ತಿರುವ ಬಗ್ಗೆ ಹಲವಾರು ವರುಷಗಳಿಂದ ದೂರುಗಳು ಕೇಳಿ ಬರುತ್ತಿದೆ.ಕಳೆದ ಒಂದು ವರುಷದಿಂದ ಈ ಪೈಪ್ಲೈನ್ ಒಡೆದು ಹೋಗಿದ್ದು, ಸುಮಾರು ಒಂದು ತಿಂಗಳ ಹಿಂದೆ ಸಮುದೆರ ತಳಮಟ್ಟದಲ್ಲಿದ್ದ ಪೈಪ್ಲೈನ್ ಅನ್ನು ಬೇರ್ಪಡಿಸಿ ಕಿನಾರೆಯಲ್ಲಿ ಬೇರ್ಪಡಿಸಿ ಇಡಲಾಗಿತ್ತು. ಇದೀಗ ತೆರೆದ ಸ್ಥಿತಿಯಲ್ಲಿರುವ ಪೈಪ್ಲೈನಿಂದಲೇ ಸ್ಥಾವರವು ನೀರು ಹೊರ ಬಿಡುತ್ತಿರುವ ಬಗ್ಗೆ ಸ್ಥಳೀಯ ಮೀನುಗಾರರು ಆತಂಕಗೊಂಡಿದ್ದಾರೆ.ಕಂಪನಿಯ ಇಷ್ಟು ಗಾಢ ನಿರ್ಲಕ್ಷ್ಯತೆಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಮೀನುಗಾರರು ಕಂಪನಿಯು ಕಾನೂನಾತ್ಮಕ ನಿರ್ದಿಷ್ಟ ನಿಯಮಗಳನ್ನು ಗಾಳಿಗೆ ತೂರಿ ಸ್ಥಳೀಯ ನಿವಾಸಿಗಳ ಅಸ್ತಿತ್ವ ಮತ್ತು ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ದೂರಿದ್ದಾರೆ.
ಸುಮಾರು ಆರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಕಾಣಿಸಿಕೊಂಡ ತೀವ್ರ ಕಡಲ್ಕೊರೆತದಿಂದಾಗಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಪೈಪ್ ಲೈನ್ ಗೆ ಅಳವಡಿಸಲಾಗಿದ್ದ ಬ್ರೇಕ್ವಾಟರ್ ಅನ್ನು ತೆರವುಗೊಳಿಸಿತ್ತು. ಆ ಬಳಿಕ ಈ ಪ್ರದೇಶದಲ್ಲಿ ಕಡಲ್ಕೊರೆತ ಕ್ಷೀಣಿಸತೊಡಗಿತ್ತು. ಇದೀಗ ಯುಪಿಸಿಎಲ್ ಕಂಪನಿಯು ಸರಕಾರ ಸೂಚಿಸಿದ ಯಾವುದೇ ಕ್ರಮಗಳನ್ನು ಪಾಲಿಸದೆ ಸಮುದ್ರದ ವಾತಾವರಣವನ್ನು ಕಲುಪಿಷಿತಗೊಳಿಸುತ್ತಿದ್ದು ಸ್ಥಳೀಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಒಂದು ವೇಳೆ ಸ್ಥಾವರದಲ್ಲಿ ಉತ್ಪಾದನೆಯು ಸುಲಲಿತವಾಗಿ ಸಾಗುತ್ತಿದ್ದರೆ ಆ ಪ್ರಕಾರ ಕಂಪನಿಯು ಬಿಸಿ ನೀರಿನ ವಿಸರ್ಜನೆಯನ್ನು ಮಾಡುತ್ತಿರಲೇಬೇಕು.ಅಂದರೆ ಒಡೆದ ಪೈಪಿನಿಂದ ಸುಮಾರು ಒಂದು ವರುಷಗಳ ಕಾಲ ಮತ್ತು ಕಡಲ ಕಿನಾರೆಯಲ್ಲಿ ತೆರೆಯಲ್ಪಟ್ಟ ಸ್ಥಿತಿಯಲ್ಲಿರುವ ಪೈಪಿನಿಂದ ಒಂದೂವರೆ ತಿಂಗಳಿನಿಂದ ಈ ಕಲ್ಮಶ ಹೊರ ಸೂಸಲಾಗುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾದಂತಿದೆ. ಇವೆಲ್ಲದರಿಂದ ಸ್ಥಳೀಯರ ಅಸ್ತಿತ್ವಕ್ಕೆ ತೀವ್ರ ತೊಂದರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷತೆಗೆ ಬಲಿಯಾಗುವಂತಹ ಪರಿಸ್ಥಿತಿ ಉಂಟಾಗಿದೆ.
ಕಳೆದ ಒಂದು ತಿಂಗಳಿನಿಂದ ಸ್ಥಳೀಯ ಪ್ರದೇಶಗಳಲ್ಲಿ ಮೀನುಗಾರಿಕೆ ಒಮ್ಮಿಂದೊಮ್ಮೆಗೆ ಕ್ಷೀಣಿಸತೊಡಗಿದೆ. ಎರ್ಮಾಳು ಉಚ್ಚಿಲ, ಕಾಡಿಪಟ್ಣ, ನಡಿಪಟ್ಣ ಊರುಗಳಲ್ಲಿನ ಮೀನುಗಾರರು ಭಯಭೀತರಾಗಿದ್ದಾರೆ. ಸ್ಥಳೀಯ ನಿವಾಸಿಗಳ ವಿರೋಧದ ನಡುವೆಯೂ ತಲೆಯೆತ್ತಿ ನಿಂತಿದ್ದ ಯುಪಿಸಿಎಲ್ ಅಣು ವಿದ್ಯುತ್ ಸ್ಥಾವರ ಜನರ ಅವಶ್ಯಕತೆಗಳಿಗೆ ಸ್ಪಂದಿಸುವ ನಾಟಕವಾಡುತ್ತಾ ಕೊನೆಗೆ ಜನರ ಅಸ್ತಿತ್ವವನ್ನೇ ಕೊನೆಗೊಳಿಸುವ ಬೇಜವ್ಬಾರಿ ದುರುದ್ದೇಶಹೊಂದಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಯಿಸಿರುವ ಸ್ಥಳೀಯ ಕೈರಂಪಣಿ ಮೀನುಗಾರರು, ನಮಗೆ ಸರಕಾರ, ಕಾನೂನು ಮತ್ತು ಕಾನೂನಾತ್ಮಕ ನೀತಿಗಳಗಳ ಅರಿವಿಲ್ಲ.
ಈ ಮಧ್ಯೆ ನಮಗಾಗುತ್ತಿರುವ ಸಮಸ್ಯೆಗಳನ್ನು ಜಗಜ್ಜಾಹಿರು ಮಾಡಲು ಅವಕಾಶವ, ವೇದಿಕೆಗಳಿಲ್ಲ. ಇವೆಲ್ಲದರ ಮೇಲ್ವಿಚಾರಣೆ ಮಾಡಬೇಕಾದ ಅಧಿಕಾರಿಗಳು ಹತ್ತಿರವೂ ಸುಳಿಯುತ್ತಿಲ್ಲ. ಸ್ತಾವರದಿಂದ ಕಡಲಗರ್ಭಕ್ಕೆ ಸೇರುವ ಕಲ್ಮಶ ನೀರಿನಿಂದ ಮೀನಿನ ಸಂತತಿ ನಾಶವಾಗುತ್ತಿದೆ. ನಮ್ಮ ಅಸ್ತಿತ್ವಕ್ಕೆ ಸಂಚಕಾರ ತಂದೊಡ್ಡಿದೆ.ಊರಿನಲ್ಲಿ ರೋಗ ಭಾದೆಗಳು ಹೆಚ್ಚುತ್ತಿದೆ. ಕಡಲನ್ನೇ ನಂಬಿ ಬದುಕುತ್ತಿರುವ ನಮ್ಮ ಮೇಲೆ ಸರಕಾರ ದಬ್ಬಾಳಿಕೆ ಮಾಡುತ್ತಿದೆ ಎಂದು ಅನಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಯುಪಿಸಿಎಲ್ ಪ್ರಕೃತಿ ವಿರೋಧಿ ಚಟುವಟಿಕೆಗಳಿಂದ ಬೇಸತ್ತಿರುವ ನಮಗೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಾಂಪ್ರದಾಯಿಕ ಮತ್ತು ಹೊಟ್ಟೆತುಂಬುವ ಕಾಯಕವಾದ ಮೀನುಗಾರಿಕಯನ್ನೂ ಮಾಡಲು ಸಾಧ್ಯವಾಗದಂತೆ ಅವೈಜ್ಞಾನಿಕ ರೀತಿಯಲ್ಲಿ ಕಡಲ ಕಿನಾರೆಯಲ್ಲಿ ಕಲ್ಲುಬಂಡೆಗಳ ರಾಶಿಯನ್ನು ಡಂಪ್ ಮಾಡಲಾಗುತ್ತಿದೆ. ಬೀಚ್ ಅಭಿವೃದ್ಧಿಯ ಸೋಗಿನಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಡಲಿ ಕಿನಾರೆ ಪ್ರಕೃತಿಯನ್ನು ನಾಶಗೊಳಿಸಿ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಇವೆಲ್ಲದರ ಬಗ್ಗೆ ಸರಕಾರ ಅಥವಾ ಸಂಬಂಧಪಟ್ಟ ಇಲಾಖೆಗಳು ಗಮನಹರಿಸದಿದ್ದಲ್ಲಿ ಮೀನುಗಾರ ಸಮುದಾಯ ಉಗ್ರ ಪ್ರತಿಭಟನೆಗೆ ಅಣಿಯಾಗಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.