ಬೆಂಗಳೂರು: ‘ಹೋರಾಟನಿರತ ರೈತರನ್ನು ಭಯೋತ್ಪಾದಕರೆಂದು ಹೇಳಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ಹಾಗೂ ಶೃಂಗೇರಿ ಉಪ ನೋಂದಣಾಧಿಕಾರಿ ಅವರಿಂದ ತಮ್ಮ ಆಪ್ತರ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಹೊತ್ತಿರುವ ಕಂದಾಯ ಸಚಿವ ಆರ್. ಅಶೋಕ ತಮ್ಮ ಸ್ಥಾನಗಳಿಗೆ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಎದುರು ಸೇರಿದ್ದ ಪಕ್ಷದ ಕಾರ್ಯಕರ್ತರು, ಸಚಿವರಾದ ಪಾಟೀಲ ಹಾಗೂ ಅಶೋಕ ಮುಖವಾಡ ಧರಿಸಿ ದ್ದರು. ‘ಕಂದಾಯ ಸಚಿವ ಅಶೋಕ ಅವರ ಕಂದಾಯ ವಸೂಲಿ ಚೆನ್ನಾಗಿ ದೆಯಾ?’ ಸೇರಿ ಹಲವು ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿ ವ್ಯಂಗ್ಯವಾಡಿದರು.
ದೆಹಲಿಯ ಕೆಂಪುಕೋಟೆ ಮೇಲೆ ಬಿಜೆಪಿಯವರೇ ದಾಳಿ ನಡೆಸಿ ರೈತರ ಹೆಸರಿಗೆ ಕಳಂಕ ತರಲು ಯತ್ನಿಸಿದ್ದಾರೆ.
ರೈತ ಹೋರಾಟದ ದಿಕ್ಕು ತಪ್ಪಿಸಲು ಬಿಜೆಪಿಯವರು ಮಾಡಿದ ಹುನ್ನಾರ ಇದಾಗಿದೆ. ಇಷ್ಟಾದರೂ ಸಚಿವ ಬಿ.ಸಿ. ಪಾಟೀಲ, ರೈತರನ್ನು ಅವಮಾನಿಸುವ ಹೇಳಿಕೆ ನೀಡಿದ್ದಾರೆ. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದೂ ಪ್ರತಿಭಟನಕಾರರು ಹೇಳಿದರು.
‘ಸಚಿವ ಅಶೋಕ, ತಮ್ಮ ಆಪ್ತ ಸಹಾ ಯಕನ ಮೂಲಕ ಲಂಚ ವಸೂಲಿ ಮಾಡಿಸುತ್ತಿದ್ದಾರೆ. ಶೃಂಗೇರಿ ಉಪನೋಂದ ಣಾಧಿಕಾರಿ ಜೊತೆ ಆಪ್ತ ಸಹಾಯಕ ಮಾತನಾಡಿರುವ ದೂರವಾಣಿ ಸಂಭಾಷಣೆ ಬಹಿರಂಗವಾಗಿದೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿರುವುದು ಸಾಬೀತಾಗಿದೆ’ ಎಂದೂ ಅವರು ದೂರಿದರು.
ಕಾಂಗ್ರೆಸ್‌ನ ಬೆಂಗಳೂರು ನಗರ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.