Tuesday, September 28, 2021
Homeಕರಾವಳಿಆರು ಆಸ್ಪತ್ರೆಗೆ ಅಲೆದಾಡಿದ ತುಂಬು ಗರ್ಭಿಣಿ : ಮಂಗಳೂರಲ್ಲಿ ಮಾನವೀಯತೆ ಮರೆತರೇ ವೈದ್ಯರು…?

ಆರು ಆಸ್ಪತ್ರೆಗೆ ಅಲೆದಾಡಿದ ತುಂಬು ಗರ್ಭಿಣಿ : ಮಂಗಳೂರಲ್ಲಿ ಮಾನವೀಯತೆ ಮರೆತರೇ ವೈದ್ಯರು…?

- Advertisement -
Renault
- Advertisement -
Home Plus
- Advertisement -

ಮಂಗಳೂರು : ಮಂಗಳೂರಿನಲ್ಲಿ ಮಾನವೀಯತೆ ಇದೆಯೇ… ಇಲ್ಲವೇ… ಎಂಬುದಕ್ಕೆ ಮತ್ತೊಂದು ನಿದರ್ಶನವೊಂದು ನಡೆದಿದೆ.
ಇದೊಂದು ಅಮಾನವೀಯ ಹಾಗೂ ತಲೆತಗ್ಗಿಸಬೇಕಾದ ಘಟನೆ ಎಂದೂ ಹೇಳಬಹುದು. ವೈದ್ಯರ ಬಳಿ ಎಷ್ಟು ಕೇಳಿಕೊಂಡು ಬೇಡಿದರೂ ಸಕಾಲದಲ್ಲಿ ಚಿಕಿತ್ಸೆ ಸಿಗದೆ ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕೊರೋನಾ ಸೋಂಕು ಇದೆ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆ ಡಾ.ಪ್ರಿಯಾ ಬಲ್ಲಾಳ್, ತುಂಬು ಗರ್ಭಿಣಿ ಜೆಪ್ಪು ಮುಳಿಹಿತ್ಲು ನಿವಾಸಿ ಖತೀಜಾ ಜಾಸ್ಮಿನ್ ಎಂಬವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಖತೀಜಾ ಜಾಸ್ಮಿನ್ ಚಿಕಿತ್ಸೆಗಾಗಿ ನಗರದ ಆರು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ, ಅಲ್ಲಿಯೂ ಬೇರೆ ವೈದ್ಯರು ನನಗೆ ಚಿಕಿತ್ಸೆ ನೀಡದಂತೆ ಡಾ. ಪ್ರಿಯಾ ಬಲ್ಲಾಳ್ ತಡೆದಿದ್ದಾರೆ ಎಂದು ಖತೀಜಾ ಜಾಸ್ಮಿನ್ ಆರೋಪಿಸಿದ್ದಾರೆ. ಹೊಟ್ಟೆ ನೋವಿನ ನಡುವೆಯೇ ಆಸ್ಪತ್ರೆಗೆ ತೆರಳಿದ ಸೋಂಕಿತ ಗರ್ಭಿಣಿ ಖತೀಜಾ ಜಾಸ್ಮಿನ್ ಅವರಿಗೆ, ಡಾ.ಪ್ರಿಯಾ ಬಲ್ಲಾಳ್ ಕೊರೋನ ಗುಣಮುಖರಾಗದೇ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಖತೀಜಾ ಜಾಸ್ಮಿನ್ ಬೇರೆ ಬೇರೆ ಆಸ್ಪತ್ರೆಯ ಐದಕ್ಕೂ ಹೆಚ್ಚು ವೈದ್ಯರನ್ನು ಸಂಪರ್ಕಿಸಿದ್ದಾರೆ. ವಿಪರ್ಯಾಸವೆಂದರೆ, ದಿನಪೂರ್ತಿ ಅಲೆದಾಡಿದರೂ ಎಲ್ಲಿಯೂ ತುಂಬು ಗರ್ಭಿಣಿ ಖತೀಜಾ ಜಾಸ್ಮಿನ್ ಅವರಿಗೆ ಚಿಕಿತ್ಸೆ ಸಿಕ್ಕಿಲ್ಲ.

” ತುಂಬು ಗರ್ಭಿಣಿಯಾಗಿದ್ದ ನನಗೆ ಕೊರೋನಾ ಬಂದಿತ್ತು. ಆದ್ದರಿಂದ ತುರ್ತು ಚಿಕಿತ್ಸೆಗಾಗಿ ನಾನು ಡಾ.ಪ್ರಿಯಾ ಬಲ್ಲಾಳ್ ಅವರನ್ನು ಭೇಟಿಯಾಗಿದ್ದೆನು. ಆದರೆ ಅವರು ನನಗೆ ಕೊರೋನಾ ಇದ್ದ ಕಾರಣ, ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ್ದರು. ಆ ಬಳಿಕ ನಾನು ಬೇರೆ ಆಸ್ಪತ್ರೆಗೆ ತೆರಳಿದ್ದೆನು. ಆದರೆ ಅವರು ಹಣ ಮತ್ತು ರಾಜಕೀಯ ಬಲದಿಂದ ಯಾವ ಆಸ್ಪತ್ರೆಯಲ್ಲೂ ನನಗೆ ಚಿಕಿತ್ಸೆ ನೀಡದಂತೆ ಮಾಡಿದ್ದಾರೆ. ಮಾತ್ರವಲ್ಲ, ಬೇರೆ ಆಸ್ಪತ್ರೆಯ ವೈದ್ಯರ ಮೂಲಕ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ತುರ್ತು ಚಿಕಿತ್ಸೆಯ ಅಗತ್ಯತೆಯ ಸಮಯದಲ್ಲಿ ಎಲ್ಲಿಯೂ ಚಿಕಿತ್ಸೆ ನೀಡದಂತೆ ವ್ಯವಸ್ಥೆ ಮಾಡಿ ನನ್ನನ್ನು ಮತ್ತು ಇಡೀ ಕುಟುಂಬವನ್ನು ತೀವ್ರ ಆತಂಕಕ್ಕೆ ಒಳಪಡಿಸಿದ್ದಾರೆ. ಡಾಕ್ಟರ್ ಪ್ರಿಯಾ ಬಳ್ಳಾಲ್ ಸೇರಿದಂತೆ ಡಾಕ್ಟರ್ ಜಯಪ್ರಕಾಶ್, ಡಾಕ್ಟರ್‌ ವಿಜಯ್, ಡಾಕ್ಟರ್ ಮುರಳೀಧರ್ ಸಕಾಲದಲ್ಲಿ ನನಗೆ ವೈದ್ಯಕೀಯ ಚಿಕಿತ್ಸೆ ನೀಡದೆ ಅಮಾನವೀಯವಾಗಿ ನನ್ನ ಜೊತೆ ವರ್ತಿಸಿದ್ದಲ್ಲದೆ, ನನ್ನ ಮತ್ತು ನನ್ನ ಮಗುವಿನ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ ” ಎಂದು ಖತೀಜಾ ಜಾಸ್ಮಿನ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರು ಖಾಸಗಿ ಆಸ್ಪತ್ರೆಗಳ 4 ವೈದ್ಯರ ಮೇಲೆ ತುಂಬು ಗರ್ಭಿಣಿ ಖತೀಜಾ ಜಾಸ್ಮಿನ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಆಸ್ಪತ್ರೆಯ ವೈದ್ಯರಾದ ಡಾ. ಜಯಪ್ರಕಾಶ್‌ ಅವರ ಬಳಿ ಚಿಕಿತ್ಸೆಗೆ ತೆರಳಿದ್ದ ವೇಳೆ ಅವರು ಡಾಕ್ಟರ್ ಪ್ರಿಯಾ ಬಳ್ಳಾಲ್‌ರವರಲ್ಲಿ ಪಡೆದುಕೊಳ್ಳುತ್ತಿದ್ದ ವೈದ್ಯಕೀಯ ಚಿಕಿತ್ಸಾ ಚೀಟಿಗಳನ್ನು ಪರಿಶೀಲಿಸಿದರು. ಡಾಕ್ಟರ್ ಪ್ರಿಯಾ ಬಳ್ಳಾಲ್‌ ಜೊತೆ ಫೋನ್ ಮಾತುಕಥೆ ನಡೆಸಿದ ಬಳಿಕ, ಡಾ. ಜಯಪ್ರಕಾಶ್‌ ನಮ್ಮ ಜೊತೆ ಮಾನವೀಯತೆಯಿಂದ ವರ್ತಿಸಿಲ್ಲ. ನನ್ನನ್ನು ಪರೀಕ್ಷಿಸಿದ ನಂತರ ನನ್ನ ಕುಟುಂಬಸ್ಥರನ್ನು ಕರೆದು “ಇವರ ಹೊಟ್ಟೆಯಲ್ಲಿದ್ದ ಮಗು ಸತ್ತಿದೆ.. ಇವರು ಕೂಡ ಇನ್ನು ಅರ್ಧ ಗಂಟೆಯಲ್ಲಿ ಸಾಯುತ್ತಾರೆ.. ನಿಮ್ಮ ಕುಟುಂಬದವರು ಯಾರಾದರೂ ಇದ್ದರೆ ಕರೆಯಿರಿ.. ಇನ್ನು ಹೆಚ್ಚು ಸಮಯ ಇವರು ಬದುಕುವುದಿಲ್ಲ” ಎಂದು ಎಲ್ಲರನ್ನು ಆತಂಕಕ್ಕೆ ಒಳಪಡಿಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಖತೀಜ ಜಾಸ್ಮಿನ್ ಕಣ್ಣೀರು ಹಾಕಿದ್ದಾರೆ. ಇದೇ ರೀತಿ ನಾವು ಒಂದು ದಿನದಲ್ಲಿ ಸುಮಾರು ಆರಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಅಲೆದಾಡಿದ್ದು, ಎಲ್ಲಾ ಆಸ್ಪತ್ರೆಗಳ ವೈದ್ಯರು ಅಮಾನವೀಯವಾಗಿ ನಮ್ಮ ಜೊತೆ ವರ್ತಿಸಿದ್ದಾರೆ. ಡಾಕ್ಟರ್ ಪ್ರಿಯಾ ಬಳ್ಳಾಲ್ ಜೊತೆ ಮಾತನಾಡಿದ ಬಳಿಕ ನನಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಆಸ್ಪತ್ರೆಯಲ್ಲಿ ನುರಿತ ವೈದ್ಯರಿದ್ದರೂ ನನಗೆ ಚಿಕಿತ್ಸೆ ನೀಡಿಲ್ಲ. ಆ ಬಳಿಕ ನಾವು ದಾರಿ ಕಾಣದೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಚೊಕ್ಕಬೆಟ್ಟಿನ ಮೊಹಮ್ಮದ್ ಆಸಿಫ್ ಎಂಬವರಿಗೆ ಫೋನ್ ಮಾಡಿ ವಿಚಾರ ತಿಳಿಸಿದೆವು. ಬಳಿಕ ಅವರು ನಮಗೆ ನಗರದ ಸರ್ಕಾರಿ ಆಸ್ಪತ್ರೆ ಲೇಡಿಗೋಶನ್ ಅಲ್ಲಿ ಹೆರಿಗೆಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಖತೀಜ ಜಾಸ್ಮಿನ್ ತಿಳಿಸಿದ್ದಾರೆ.

ಡಾಕ್ಟರ್ ಪ್ರಿಯಾ ಬಳ್ಳಾಲ್ ಅವರು ಯಾವುದೋ ದುರುದ್ದೇಶವನ್ನಿಟ್ಟುಕೊಂಡು ಈ ರೀತಿ ನನ್ನ ಜೊತೆ ನಡೆದುಕೊಂಡಿದ್ದಾರೆ. ಜೀವನ್ಮರಣ ಹೋರಾಟದ ಸಂದರ್ಭದಲ್ಲಿಯೂ ಉದ್ದೇಶ ಪೂರ್ವಕವಾಗಿ ವೈದ್ಯಕೀಯ ಚಿಕಿತ್ಸೆ ನೀಡಿಲ್ಲ. ಮಾತ್ರವಲ್ಲ, ಬೇರೆ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿಯೂ ಕೂಡ ವೈದ್ಯಕೀಯ ನೆರವು ನೀಡದಂತೆ ತಡೆಯೊಡ್ಡಿದ್ದಾರೆ. ಡಾಕ್ಟರ್ ಜಯಪ್ರಕಾಶ್, ಡಾಕ್ಟರ್‌ ವಿಜಯ್, ಡಾಕ್ಟರ್ ಮುರಳೀಧರ್ ಜೊತೆ ಮಾತನಾಡಿ ನನಗೆ ಚಿಕಿತ್ಸೆ ನೀಡದೆ ಕೊಲ್ಲುವ ಯತ್ನವನ್ನು ಮಾಡಿರುತ್ತಾರೆ. ಈ ಸ್ಥಿತಿ ಮುಂದೆ ಯಾರಿಗೂ ಆಗಬಾರದು. ವೈದ್ಯರ ಈ ನಡವಳಿಕೆಗಳ ಹಿಂದೆ ಯಾವ ಉದ್ದೇಶವಿದೆ ಎಂಬುವುದು ಗೊತ್ತಾಗಬೇಕು. ನನಗೆ ಆದ ಈ ಅನ್ಯಾಯ ಇನ್ಯಾರಿಗೂ ಆಗಬಾರದು. ಈ ಮೂಲಕ ಇತರರಿಗೂ ನ್ಯಾಯ ದೊರಕಿಸಿ ಎಂದು ಖತೀಜ ಜಾಸ್ಮಿನ್ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತೆ ಎಂಬ ಕಾರಣಕ್ಕೆ ಗರ್ಭಿಣಿಯಾದ ನನಗೆ ಚಿಕಿತ್ಸೆ ನೀಡದೆ ಬೇರೆಡೆಗೆ ಕಳುಹಿಸಿ, ಹೆರಿಗೆ ಮಾಡಿಸಲು ಸತಾಯಿಸದ ಈ ಎಲ್ಲಾ ಡಾಕ್ಟರ್ ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಖತೀಜ ಜಾಸ್ಮಿನ್ ಒತ್ತಾಯಿಸಿದ್ದಾರೆ.

ಸದ್ಯ ವೈದ್ಯರ ಈ ವರ್ತನೆಯಿಂದ ಇದೀಗ ಮಗುವಿನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದೆ. ತಾಯಿಯ ಆರೋಗ್ಯವು ಕೂಡ ಹದಗೆಟ್ಟಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments