Tuesday, September 28, 2021
Homeಕರಾವಳಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳನ್ನು ತೆರೆಯಲು ಅನುಮತಿ… ಸೆಪ್ಟೆಂಬರ್ 17 ರಿಂದ ಹೈಸ್ಕೂಲ್...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳನ್ನು ತೆರೆಯಲು ಅನುಮತಿ… ಸೆಪ್ಟೆಂಬರ್ 17 ರಿಂದ ಹೈಸ್ಕೂಲ್ ತರಗತಿಗಳು, 20 ರಿಂದ 6-7ನೇ ತರಗತಿ ಆರಂಭ… ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಲೆಗಳನ್ನು ತೆರೆಯಬೇಕು : ಜಿಲ್ಲಾಧಿಕಾರಿ ಡಾ. ರಾಜೇಂದ್ರ .ಕೆ.ವಿ… ಶಾಲೆಗಳ ಆರಂಭಧ ಜಿಲ್ಲಾಧಿಕಾರಿ ನಿರ್ಧಾರಕ್ಕೆ ಖಾಸಗಿ ಶಾಲಾಡಳಿತ ಒಕ್ಕೂಟ ಸ್ವಾಗತ…

- Advertisement -
Renault
- Advertisement -
Home Plus
- Advertisement -

ಮಂಗಳೂರು : ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿನ್ನೆ ಜಿಲ್ಲೆಯಲ್ಲಿ ಶಾಲೆಗಳನ್ನು ತೆರೆಯುವ ಬಗ್ಗೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಲೆಗಳನ್ನು ತೆರೆಯಬೇಕು ಹಾಗೂ ಮಕ್ಕಳಿಗೆ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು ಜೊತೆಗೆ ಎಲ್ಲಾ ಪ್ರಥಮ ಪಿ.ಯು.ಸಿ ತರಗತಿಗಳನ್ನು ಆರಂಭಿಸಲು ತಿಳಿಸಿದರು. ಸೆಪ್ಟೆಂಬರ್ 17 ರಿಂದ 8, 9 ಮತ್ತು 10 ನೇ ತರಗತಿಗಳನ್ನು ಮತ್ತು ಸೆಪ್ಟೆಂಬರ್ 20 ರಿಂದ 6 ಮತ್ತು 7ನೇ ತರಗತಿಗಳನ್ನು ಆರಂಭಿಸಲು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಶೇ.99 ರಷ್ಟು ಶಾಲಾ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡಲಾಗಿದ್ದು, ಕೋವಿಡ್ ಪರೀಕ್ಷೆಗಳನ್ನು ಹೆಚ್ಚಾಗಿ ನಡೆಸಬೇಕು. ಜಿಲ್ಲೆಯಲ್ಲಿ ಈಗಾಗಲೇ 261 ಮಕ್ಕಳು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದು, ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಅಂತವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕಂಡುಹಿಡಿದು ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.

ಶಾಲೆಗಳು ಆರಂಭವಾದ ನಂತರ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಶಿಕ್ಷಕರು ಸೂಕ್ತ ಮಾಹಿತಿಯನ್ನು ನೀಡಬೇಕು ಎಂದರು. ಶಾಲೆಗಳು ಆರಂಭವಾದ ನಂತರ ಮಕ್ಕಳಲ್ಲಿ ಶುಲ್ಕ ಪಾವತಿಸಲು ಒತ್ತಾಯಿಸಬಾರದೆಂದು ತಿಳಿಸಿದರು. ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳನ್ನು ಶಾಲೆಯ ಮುಖ್ಯಸ್ಥರು ಒದಗಿಸಬೇಕು ಎಂದರು. ಶಾಲೆಗಳು ಆರಂಭವಾದ ಬಳಿಕ ಭೌತಿಕ ತರಗತಿಗಳ ಜೊತೆಗೆ ಆನ್‌ಲೈನ್ ತರಗತಿಗಳನ್ನು ಕೂಡ ಮುಂದುವರೆಸಬೇಕು. ಭೌತಿಕ ತರಗತಿಗಳಿಗೆ ಹಾಜರಾಗುವ ಸಂಬಂಧ ಪೋಷಕರ ಅನುಮತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಕಾಲಕಾಲಕ್ಕೆ ಶಿಕ್ಷಕರ ಹಾಗೂ ಶಾಲಾ ಸಿಬ್ಬಂದಿಗಳ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕು. ವಿದ್ಯಾರ್ಥಿಗಳ ಕುಟುಂಬದವರ ಆರೋಗ್ಯವನ್ನು ಆಯಾ ಶಿಕ್ಷಣ ಸಂಸ್ಥೆಯು ಗಮನಿಸಬೇಕು ಹಾಗೂ ಅವರಲ್ಲಿ ಕೋವಿಡ್ ಲಕ್ಷಣ ಇಲ್ಲದಿರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು ಎಂದರು. ಕೇರಳದಿಂದ ಬರುವ ಮಕ್ಕಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಆನ್‌ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎನ್.ಮಾಣಿಕ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಯಣ್ಣ, ಖಾಸಗಿ ಶಾಲಾ ಅಸೋಷಿಯೇಶನ್‌ನ ಮುಖ್ಯಸ್ಥರು, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಖಾಸಗಿ ಶಾಲಾಡಳಿತ ಒಕ್ಕೂಟದ ಉಪಾಧ್ಯಕ್ಷ ಮಂಜುನಾಥ ರೇವಣಕರ್ ಮಾತನಾಡಿ, ಶುಕ್ರವಾರದಿಂದ 8 ರಿಂದ 10 ನೇ ತರಗತಿಗಳನ್ನು ಆರಂಭಿಸಲು ಜಿಲ್ಲಾಡಳಿತ ಹಸಿರು ನಿಶಾನೆ ನೀಡಿದ್ದು, ಅದರಂತೆ ಶಾಲೆಗಳ ಆರಂಭ ಮಾಡಲಾಗುವುದು ಎಂದು ಹೇಳಿದ್ದಾರೆ. ಆದರೆ, ಒಂದರಿಂದ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮಾತ್ರ ಸದ್ಯಕ್ಕೆ ಆನ್‌ಲೈನ್ ಅಥವಾ ಆಫ್‌ಲೈನ್ ಶಿಕ್ಷಣ ಮುಂದುವರಿಯಲಿದೆ. ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು, ಜಿಲ್ಲಾಡಳಿತದ ನಿರ್ಧಾರವನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸ್ವಾಗತಿಸಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments