ಉಡುಪಿ, ಫೆ.20: ಆರೆಸ್ಸೆಸ್ ದೇಣಿಗೆ ಕೇಳಲು ಬಂದರೆ ಒಂದು ರೂಪಾಯಿ ಕೊಡಬೇಡಿ ಎಂದಿದ್ದ ಪಿಎಫ್ಐ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಿ ಎಂದು ಪಿಎಫ್ಐ ಸಂಘಟನೆಯ ಬಳಿ ಯಾರೂ ಹೋಗಿಲ್ಲ. ಮಂದಿರಕ್ಕಾಗಿ ಪಿಎಫ್‌ಐ ದೇಣಿಗೆಯೂ ಬೇಕಿಲ್ಲ ಎಂದು ಸಂಸದೆ ಶೋಭಾ ಹೇಳಿದ್ದಾರೆ.
ಕಾಪುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, ಪಿಎಫ್‌ಐ ರಾಷ್ಟ್ರವಿರೋಧಿ ಸಂಘಟನೆ. ಸಂಘ ಪರಿವಾರದ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆಗೆ ರಾಮ ಮಂದಿರದ ಬಗ್ಗೆ ಮಾತನಾಡುವ ನೈತಕ ಹಕ್ಕೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಎರಡೂ ಸರಕಾರಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಪಿಎಫ್ಐ ಮೇಲಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಗೃಹ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ. ಶೀಘ್ರವೇ ಸಂಘಟನೆ ನಿಷೇಧವಾಗುವ ವಿಶ್ವಾಸವಿದೆ ಎಂದವರು ನುಡಿದರು.
ಕೇರಳದಲ್ಲಿ ಪಿಎಫ್ಐ ಓಲೈಕೆ
ಕೇರಳದಲ್ಲಿ ದಂಡ ಹಾಗೂ ಆಯುಧಗಳೊಂದಿಗೆ ಮೆರವಣಿಗೆ ನಡೆಸಲು ಪಿಎಫ್ಐಗೆ ಅನುಮತಿ ನೀಡಿರುವುದು ಮುಸಲ್ಮಾನರ ಓಲೈಕೆಗೆ. ಅಲ್ಲಿನ ಸರಕಾರದ ಅನುಮತಿಯೊಂದಿಗೆ ಇದೆಲ್ಲ ನಡೆಯುತ್ತಿದೆ. ಪಿಎಫ್‌ಐ ರಾಷ್ಟ್ರ ವಿರೋಧಿ ಸಂಘಟನೆ ಎಂದು ಕೇರಳ ಸರಕಾರಕ್ಕೆ ತಿಳಿದಿದೆ. ತಿಳಿದಿದ್ದರೂ ಮುಸ್ಲಿಮರ ಓಟು ಪಡೆಯಲು ಪಿಎಫ್‌ಐಗೆ ಈ ರೀತಿಯ ಮೆರವಣಿಗೆ ನಡೆಸಲು ಅನುಮತಿ ನೀಡಿದೆ ಎಂದು ಆರೋಪಿಸಿದರು.
ಅಪರಾಧಿಗಳಿಗೆ ಮೆರವಣಿಗೆಗೆ ಅನುಮತಿ ನೀಡಿರುವುದು ದೇಶ ವಿರೋಧಿ ಚಟುವಟಿಕೆ. ಕೇರಳ ಸರಕಾರದ ಈ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಶೋಭಾ ಕರಂದ್ಲಾಜೆ ನುಡಿದರು.