ಬೆಂಗಳೂರು (ಫೆ.03): ಜೆಡಿಎಸ್ ಸಣ್ಣ ಪ್ರಮಾಣದಲ್ಲಿ ಇರಬಹುದು. ಆದರೆ, ಕರ್ನಾಟಕ ರಾಜ್ಯದ ರಾಜಕಾರಣಕ್ಕೆ ಜೆಡಿಎಸ್ ಅನಿವಾರ್ಯವಾಗಲಿದೆ. ಅದೇ ಕಾರಣಕ್ಕಾಗಿ ಜನ ನಮ್ಮನ್ನು ಇನ್ನೂ ಉಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಭಾಪತಿ ಸ್ಥಾನದ ಕುರಿತು ಸಮಾಲೋಚನೆ ನಡೆಸಲಾಯಿತು.
ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಅನ್ನು ಪಕ್ಷವೇ ಅಲ್ಲ ಎಂದು ಹೇಳುತ್ತಾರೆ. ಆದರೆ, ದಿನಬೆಳಗಾದರೆ ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಪಕ್ಷವು ಸಣ್ಣ ಪ್ರಮಾಣದಲ್ಲಿರಬಹುದು. ಆದರೆ, ಕರ್ನಾಟಕ ರಾಜ್ಯದ ರಾಜಕಾರಣಕ್ಕೆ ಜೆಡಿಎಸ್ ಅನಿವಾರ್ಯ ಎಂದು ಹೇಳಿದರು.
ಬಿಜೆಪಿ ಜೊತೆ ಜೆಡಿಎಸ್ ಹೋಗುತ್ತಿರುವುದಕ್ಕೆ ಕೊನೆಗೂ ಕಾರಣ ಬಿಚ್ಚಿಟ್ಟ ಕುಮಾರಣ್ಣ.
ವಿಧಾನಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ತಪ್ಪಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಷಡ್ಯಂತ್ರ ನಡೆಸಿದ್ದಾರೆ. ಸಿದ್ದರಾಮಯ್ಯ ಏನೇನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಜೆಡಿಎಸ್‌ಗೆ ಯಾಕೆ ಬೆಂಬಲ ಕೊಡುತ್ತಿದ್ದೀರಿ ಎಂದು ಬಿಜೆಪಿಯ ಕೆಲವು ಶಾಸಕರನ್ನು ಕೇಳಿದ್ದಾರೆ. ಜೆಡಿಎಸ್‌ನ ಕೆಲವರನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ. ಇದೆಲ್ಲವೂ ನನಗೆ ಗೊತ್ತಿದೆ. ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ನಾಳೆಯೇ ಸಭಾಪತಿ ಸ್ಥಾನ ಸಿಗಲಿದೆ ಎಂಬ ಭ್ರಮೆಯಲ್ಲಿಲ್ಲ. 4-5 ದಿನ ತಡವಾಗಬಹುದು. ಇಲ್ಲವೇ ಮುಂದಿನ ಅಧಿವೇಶನಕ್ಕೆ ಹೋಗಬಹುದು. ಸಭಾಪತಿ ಸ್ಥಾನವನ್ನು ದಾಳಿ ಮಾಡಿ ಪಡೆಯಬೇಕು ಎಂಬುದು ಇಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ಪ್ರತಾಪ್ ಚಂದ್ರ ಶೆಟ್ಟಿಅವರಿಗೆ ವೈಯಕ್ತಿಕವಾಗಿ ಇಷ್ಟವಿಲ್ಲ. ಅದನ್ನು ಅವರೇ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ನ ಒಂದು ವರ್ಗದ ನಾಯಕರ ಒತ್ತಾಯದಿಂದ ಅವರು ರಾಜೀನಾಮೆ ಕೊಡುತ್ತಿಲ್ಲ. ಜೆಡಿಎಸ್‌ನ ಬಣ್ಣ ಬಯಲು ಮಾಡಲು ಕೆಲವು ಕಾಂಗ್ರೆಸ್ ನಾಯಕರು ಹೊರಟಿದಾರೆ. ಕಾನೂನು ಬಾಹಿರವಾಗಿ ಸಭಾಪತಿ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಸಣ್ಣತನದ ರಾಜಕೀಯದಿಂದಾಗಿ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ ಎಂದ ಅವರು, ನಮ್ಮ ಪಕ್ಷದ ಜಾತ್ಯತೀತತೆಯನ್ನು ಪರೀಕ್ಷಿಸಲು ಹೊರಟಿದ್ದಾರೆ. ಕಾಂಗ್ರೆಸ್‌ನ ಕೆಲವರು ಮಾತ್ರ ಈ ರೀತಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನಮ್ಮ ಬಂಡವಾಳ ಬಯಲು ಮಾಡುತ್ತೇನೆ ಎಂದಿದ್ದಾರೆ. ಇವರಿಂದ ನಾವು ಸರ್ಟಿಫಿಕೇಟ್ ಪಡೆಯಬೇಕಿಲ್ಲ. ಜನರೇ ನಮಗೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.