ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆ 9,30ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯವರನ್ನು ಅವರು ಇಂದು ಸಂಜೆ ಭೇಟಿಯಾಗಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿಯ ವಿವಾಹ ಆರತಕ್ಷತೆಯಲ್ಲಿ ಭಾಗಿಯಾಗಲು ರಾಹುಲ್ ಗಾಂಧಿ ನಾಳೆ (ಬುಧವಾರ) ರಾಜ್ಯಕ್ಕೆ ಬರುವ ನಿರೀಕ್ಷೆ ಇದ್ದು, ಅದರ ಮುನ್ನವೇ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿರುವುದು ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಲ್ಲೂ ಸಾಕಷ್ಟು ರಾಜಕೀಯ ಗರಿಗೆದರಿದೆ. ಇದರಿಂದಾಗಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯನ್ನು ಭೇಟಿ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಶುರುವಾಗಿದೆ.
ರಾಜ್ಯದಲ್ಲಿ ಮೀಸಲಾತಿಗಾಗಿ ಮೂರು ಪ್ರಬಲ ಸಮುದಾಯಗಳು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದರ ಜತೆ, ರಾಜ್ಯ ರಾಜಕೀಯ ಬೆಳವಣಿಗೆಗಳು, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳು ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷವಾಗಿ ತೆಗೆದುಕೊಳ್ಳಬಹುದಾದ ನಿರ್ಣಯಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಕೋವಿಡ್ ಕಾರಣದಿಂದ ಸಿದ್ದರಾಮಯ್ಯ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರಲಿಲ್ಲ. ಈಗ ಅವರು ಭೇಟಿಯಾಗದಿದ್ದು, ನಾಳೆ (ಬುಧವಾರ) ರಾಹುಲ್ ಗಾಂಧಿಯವರ ಜತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿಯ ವಿವಾಹ ಆರತಕ್ಷತೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬರಲಿದ್ದಾರೆ.