ಬಂಟ್ವಾಳ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇರಾ ಗ್ರಾಮ ನಿವಾಸಿ ದಿನೇಶ್ ಸೂತ್ರಬೈಲು ಅವರನ್ನು ಹುಟ್ಟೂರಲ್ಲಿ ಅದ್ದೂರಿಯಾಗಿ ಭವ್ಯ ಸ್ವಾಗತ ಕೋರಲಾಯಿತು.
ಇರಾ ಗ್ರಾಮದ ನಾಗರಿಕರು ಮತ್ತು ಹಲವಾರು ಕಡೆಯಿಂದ ಆಗಮಿಸಿದ್ದ ದೇಶಾಭಿಮಾನಿಗಳು ಮುಡಿಪುವಿನ ಮೂಡಿಪಿನ್ನಾರ್ ದೈವಸ್ಥಾನದ ಬಳಿಯಿಂದ ಹೊರಟ ಮೆರವಣಿಗೆಯಲ್ಲಿ ಕರೆತಂದರು. ಹಾರ, ಹೂಗುಚ್ಛ ನೀಡಿ ಅವರ ದೇಶ ಸೇವೆಗೆ ಗೌರವ ನೀಡಲಾಯಿತು.
ಬಳಿಕ ಇರಾ ಮಲಯಾಳಿ ಬಿಲ್ಲವ ಸಂಘದ ಸಮುದಾಯ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದಿನೇಶ್ ಅವರು ಹುಟ್ಟೂರಿನ ಪ್ರೀತಿಗೆ ವಂದಿಸಿದರು. ”ನನಗೆ 17 ವರ್ಷಗಳ ಕಾಲ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ದೊಡ್ಡ ಪುಣ್ಯ. ಇಂತಹ ಸೇವೆಗೆ ಎಲ್ಲಾ ಯುವಕರು ಮುಂದಾಗ ಬೇಕು” ಎಂದರು.